ಬೆಂಗಳೂರು:ಮೇ ತಿಂಗಳಿನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ತಾಲೀಮು ಆರಂಭಿಸಿರುವ ಬಿಜೆಪಿ ಹೈಕಮಾಂಡ್ ಚುನಾವಣಾ ಉಸ್ತುವಾರಿ ಮತ್ತು ಸಹ ಉಸ್ತುವಾರಿಗಳ ನೇಮಕ ಮಾಡಿದೆ. ಈ ಮೂಲಕ ಚುನಾವಣಾ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಂತದಾಗಿದೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ನೇಮಕ ಮಾಡಿದ್ದು, ಸಹ ಉಸ್ತುವಾರಿಗಳಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರನ್ನು ನೇಮಕಗೊಳಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ರಾಜ್ಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿ ರಾಜ್ಯ ರಾಜಕಾರಣದ ಮೇಲೆ ಹಿಡಿತ ಹೊಂದಿರುವ ಧರ್ಮೇಂದ್ರ ಪ್ರಧಾನ್, ರಾಜ್ಯದ ನಾಯಕರು, ಸಂಘಟನೆ, ರಾಜ್ಯದ ರಾಜಕೀಯ ಚಿತ್ರಣದ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದ್ದಾರೆ. ಮತ್ತೆ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುತ್ತಿರುವ ಹೈಕಮಾಂಡ್ ಪ್ರಧಾನ್ಗೆ ಚುನಾವಣಾ ಪ್ರಭಾರಿ ಸ್ಥಾನ ನೀಡಿದೆ. ಆರೋಗ್ಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಕೋವಿಡ್ ಸಮಯದಲ್ಲಿ ಉತ್ತಮ ಸಾಧನೆ ತೋರಿ ರಾಜ್ಯದ ಕೋವಿಡ್ ನಿರ್ವಹಣೆಗೆ ಸಹಕಾರ ನೀಡಿದ್ದ ಆರೋಗ್ಯ ಸಚಿವ ಮನ್ಸೂಕ್ ಮಾಂಡವಿಯಾ ಅವರನ್ನು ಸಹ ಪ್ರಭಾರಿಯನ್ನಾಗಿ ನೇಮಿಸಿದೆ. ಇವರ ಜೊತೆ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕರ್ನಾಟಕದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಗಮನ ಸೆಳೆದಿದ್ದು, ತಮ್ಮದೇ ಆದ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಅಲ್ಲದೆ ತಮಿಳು ಭಾಷಿಕರ ಸೆಳೆಯಲು ಪೂರಕವಾಗಿ ಅಣ್ಣಾಮಲೈಗೆ ಸಹ ಪ್ರಭಾರಿ ಸ್ಥಾನ ನೀಡಲಾಗಿದೆ ಎನ್ನಲಾಗಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರು ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿದ್ದು ಚುನಾವಣಾ ಪ್ರಚಾರ ಕಾರ್ಯಕ್ಕೆ ಮೊದಲ ಹಂತದ ಚಾಲನೆ ನೀಡಿದ್ದಾರೆ. ಇದೀಗ ಚುನಾವಣೆಗೆ ಪ್ರಭಾರಿ, ಸಹಪ್ರಭಾರಿ ನೇಮಕಗೊಳಿಸಿ ಅಧಿಕೃತವಾಗಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುತ್ತಿದೆ. ಅಭ್ಯರ್ಥಿಗಳ ಆಯ್ಕೆ, ವೀಕ್ಷಕರ ನೇಮಕ, ಕ್ಷೇತ್ರವಾರು ಅಭಿಪ್ರಾಯ ಸಂಗ್ರಹ ಸೇರಿದಂತೆ ಚುನಾವಣಾ ಪ್ರಕ್ರಿಯೆ ಸಂಬಂಧ ನಡೆಯುವ ಪ್ರಚಾರ ಕಾರ್ಯ ಸೇರಿ ಎಲ್ಲ ವಿಚಾರಗಳ ಬಗ್ಗೆ ಇನ್ಮುಂದೆ ಚುನಾವಣಾ ಉಸ್ತುವಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ.