ಬೆಂಗಳೂರು :ಕಸ್ತೂರಿ ರಂಗನ್ ವರದಿ ಜಾರಿ ವಿರುದ್ಧ ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಹೋರಾಟ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಈಶ್ವರ್ ಖಂಡ್ರೆ ಅವರ ಕುರಿತು ಶಾಸಕ ಆರಗ ಜ್ಞಾನೇಂದ್ರ ಅವರ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಂಬಂಧ ಬಿಜೆಪಿ ಕ್ಷಮೆಯಾಚಿಸಿದೆ.
ಕುಮಾರಪಾರ್ಕ್ನಲ್ಲಿರುವ ಗಾಂಧಿ ಭವನದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಶಾಸಕ ಆರಗ ಜ್ಞಾನೇಂದ್ರ ಹೇಳಿಕೆಗೆ ಪಕ್ಷದ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಹಾಗು ಈಶ್ವರ್ ಖಂಡ್ರೆ ಅವರ ಕ್ಷಮೆಯಾಚಿಸಿದರು. ಮೊನ್ನೆ ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡುವ ಭರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ ಖಂಡ್ರೆ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಗುಲ್ಬರ್ಗಾದಲ್ಲಿ ಬಿಸಿಲು ಹೆಚ್ಚು, ಮಲೆನಾಡಿನ ಪರಿಸರದ ಬಗ್ಗೆ ಗೊತ್ತಿಲ್ಲ, ಹಾಗಾಗಿ ಮರ ಗಿಡ ನೆರಳು ಗೊತ್ತಿಲ್ಲ ಎನ್ನುವ ಭರದಲ್ಲಿ ಆ ರೀತಿ ಹೇಳಿಕೆ ನೀಡಿದ್ದರು. ಇದರಿಂದಲೇ ಅಲ್ಲಿ ಬಿಸಿಲು ಹೆಚ್ಚು ಎಂದು ಗೊತ್ತಾಗುತ್ತದೆ ಎಂದು ಮಾತನಾಡಿದ್ದರು. ಆದರೆ ಬಿಜೆಪಿ ವ್ಯಕ್ತಿಯ ಬಣ್ಣ ನೋಡಿ ನಿರ್ಧಾರ ಕೈಗೊಳ್ಳುವ ಪಕ್ಷವಲ್ಲ, ವ್ಯಕ್ತಿಗಳ ಗುಣಾವಗುಣಗಳನ್ನು ನೋಡಿ ನಿರ್ಧಾರ ತೆಗೆದುಕೊಳ್ಳುವ ಪಕ್ಷ ಎಂದು ಸ್ಪಷ್ಟೀಕರಣ ನೀಡಿದರು.
ಮಾತಿನ ಭರದಲ್ಲಿ ನಮ್ಮ ಶಾಸಕ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ ಅಷ್ಟೇ. ಇದನ್ನೇ ಕಾಂಗ್ರೆಸ್ನವರು ಏನೋ ಬಹಳ ದೊಡ್ಡ ತಪ್ಪು ಮಾಡಿದ್ದಾರೆ ಎಂದು ಬಿಂಬಿಸುತ್ತ ಆರಗ ಜ್ಞಾನೇಂದ್ರ ದಲಿತರಿಗೆ ಅವಮಾನ ಮಾಡಿದರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನ ಮಾಡಿದರು ಎಂದು ದೊಡ್ಡ ವಿವಾದ ಮಾಡುತ್ತಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಇರಬಹುದು, ಈಶ್ವರ ಖಂಡ್ರೆ ಇರಬಹುದು ಅವರ ಕುರಿತು ಮಾತನಾಡಿದ ಬಗ್ಗೆ ಪಕ್ಷದ ವತಿಯಿಂದ ಕ್ಷಮೆ ಯಾಚಿಸುತ್ತೇನೆ. ಇದನ್ನು ದೊಡ್ಡ ವಿಷಯ ಮಾಡಬೇಕಿಲ್ಲ. ಅವರು ಎತ್ತಿರುವ ವಿಷಯದ ಬಗ್ಗೆ ಚರ್ಚೆ ಮಾಡಿ ಆ ವಿಚಾರದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿ. ಆದರೆ ಅವರ ಬಗ್ಗೆ ಮಾತನಾಡಿದ್ದರಿಂದ ಅವರಿಗೆ ಅವಮಾನವಾಗಿದ್ದಲ್ಲಿ ಪಕ್ಷದ ವತಿಯಿಂದ ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದರು.