ಬೆಂಗಳೂರು: ತುಮಕೂರಿನಲ್ಲಿ ಬಹಳ ಜನರು ಬಿಜೆಪಿ, ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರ ತಮ್ಮ ನಿವಾಸದಲ್ಲಿ ಇಂದು, ತುಮಕೂರು ಜಿಲ್ಲೆಯಲ್ಲಿ ಆಪರೇಷನ್ ಹಸ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರ್ಯಾರು ಬರ್ತಾರೆ ನೋಡೋಣ. ಅಲ್ಲಿ ನಮ್ಮ ಕಾರ್ಯಕರ್ತರು ಕೂಡ ಇರ್ತಾರೆ. ಸೋತವರೂ ಇರ್ತಾರೆ. ಅವರೊಂದಿಗೆ ಚರ್ಚಿಸಿ ಅಧ್ಯಕ್ಷರು ತೀರ್ಮಾನ ಮಾಡ್ತಾರೆ. ನನ್ನ ಜೊತೆ ಯಾರೂ ಈ ಬಗ್ಗೆ ಮಾತನಾಡಿಲ್ಲ. ಅಧ್ಯಕ್ಷರ ಜೊತೆ ಮಾತನಾಡಿದ್ರೆ ನಮ್ಮ ಜೊತೆ ಮಾತನಾಡಿದ ಹಾಗೆಯೇ ಎಂದರು.
ಸೌಜನ್ಯ ಹತ್ಯೆ ಪ್ರಕರಣದ ಮರುತನಿಖೆ ವಿಚಾರ: ಸೌಜನ್ಯ ಪ್ರಕರಣದ ಮರುತನಿಖೆಗೆ ಹೆಚ್ಚುತ್ತಿರುವ ಒತ್ತಾಯದ ಬಗ್ಗೆ ಮಾತನಾಡಿದ ಅವರು, ಮರುತನಿಖೆ ನಡೆಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಪರ, ವಿರೋಧದ ಪ್ರತಿಭಟನೆಗಳು ನಡೆಯುತ್ತಿವೆ. ನಾವು ಕೂಡ ಇದನ್ನು ಗಮನಿಸುತ್ತಿದ್ದೇವೆ. ನ್ಯಾಯಾಲಯಕ್ಕೂ ಹೋಗಿದ್ದಾರೆ. ಕೋರ್ಟ್ ಏನು ಆದೇಶ ಕೋಡಲಿದೆಯೋ ನೋಡೋಣ. ಕೋರ್ಟ್ ಆದೇಶದ ಹೊರತು ನಾವೇನೂ ಮಾಡಲಾಗದು ಎಂದು ಹೇಳಿದರು.
ಪಿಎಸ್ಐ ಮರುಪರೀಕ್ಷೆ:ಪಿಎಸ್ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಸುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಹಿಂದಿನ ಸರ್ಕಾರವೇ ಮರುಪರೀಕ್ಷೆಗೆ ಅವಕಾಶ ಕೊಟ್ಟಿತ್ತು. ಇದಕ್ಕೆ ಕೆಲವರು ತಡೆ ತಂದಿದ್ದಾರೆ. ಕೋರ್ಟ್ ಆದೇಶದ ಬಳಿಕ ಏನು ಮಾಡಬೇಕೆಂದು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
'ಆಪರೇಷನ್ ಹಸ್ತದ ಅನಿವಾರ್ಯತೆ ಇಲ್ಲ': ಆಪರೇಷನ್ ಹಸ್ತ ಮಾಡುವ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ. ನಮ್ಮ ತತ್ವ ಸಿದ್ಧಾಂತವನ್ನು ಯಾರು ಒಪ್ಪಿಕೊಳ್ತಾರೋ ಅಂಥವರಿಗೆ ಸ್ವಾಗತವಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, ಎಲ್ಲ ಪಕ್ಷಗಳಲ್ಲೂ ನನಗೆ ಸ್ನೇಹಿತರಿದ್ದಾರೆ. ನಾವು ಸೇರಿದಾಗ ರಾಜಕೀಯವೇ ಚರ್ಚೆ ಆಗಿದೆ ಅಂತಲ್ಲ. ಅಧಿಕಾರದಲ್ಲಿದ್ದಾಗ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಸ್ಥಳೀಯ ಮಟ್ಟದಲ್ಲಿ ಯಾರಿಗೆ ವಿರೋಧ ಇಲ್ವೋ ಅಂಥವರನ್ನು ಸೇರಿಸಿಕೊಳ್ತೇವೆ. ಸುರೇಶ್ ಗೌಡ್ರು ಬಿಜೆಪಿಯ ಶಾಸಕರು. ನಿರೀಕ್ಷೆ ಇಟ್ಟುಕೊಂಡು ಬರುವವರ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕಿರುವುದು ನಮ್ಮ ಕರ್ತವ್ಯ ಎಂದರು.
ಎಲ್ಲಿ ನಮಗೆ ಸೋಲಾಗಿದೆ, ಕಾರ್ಯಕರ್ತರಿಗೆ ಸಮಸ್ಯೆ ಆಗಿದೆ, ಅಲ್ಲಿ ನಾವು ಸಂಘಟನೆ ಕೆಲಸ ಮಾಡ್ತೇವೆ. ಸದ್ಯ ಲೋಕಸಭೆಗೆ ಅಭ್ಯರ್ಥಿಗಳ ಕೊರತೆ ಏನೂ ಕಾಣ್ತಿಲ್ಲ. ನಮ್ಮ ಗುರಿ ಇರುವುದು ಗ್ಯಾರಂಟಿ ಜಾರಿ ಮಾಡುವುದು. ಆಪರೇಷನ್ ಹಸ್ತ ಎನ್ನುವ ಪದವೇ ಇಲ್ಲ. ಅಧಿಕಾರ ಬೇಕು ಅಂದ್ರೆ ಆಪರೇಷನ್ ಹಸ್ತ ಬೇಕಾಗುತ್ತದೆ. ಪಕ್ಷವನ್ನು ಕಾರ್ಯಕರ್ತರ ಮೂಲಕ ಸಂಘಟನೆ ಮಾಡಬೇಕಾದ ಜವಾಬ್ದಾರಿ ಮಾತ್ರ ನಮ್ಮ ಮೇಲಿದೆ. ಅದನ್ನು ಎಲ್ಲ ಪಕ್ಷಗಳೂ ಕೂಡ ಮಾಡುತ್ತವೆ. ನಾವು ಯಾರನ್ನೂ ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡ್ತಿಲ್ಲ. ಎಲ್ಲಿ ನಮ್ಮ ಪಕ್ಷ ದುರ್ಬಲವಾಗಿದೆಯೋ ಅಲ್ಲಿ ಸಂಘಟನೆ ಗಟ್ಟಿ ಮಾಡಬೇಕಿದೆ ಎಂದು ತಿಳಿಸಿದರು.
ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿ, ಸದ್ಯಕ್ಕೆ ನಾನು ರಾಜಕಾರಣವೇ ಸಾಕು ಅಂತಿದ್ದೇನೆ. ನನ್ನನ್ನು ರಾಜಕೀಯವಾಗಿ ಬೆಳೆಸುತ್ತಿರುವವರ ತೀರ್ಮಾನವೇ ಅಂತಿಮ. ರಾಜ್ಯ ರಾಜಕಾರಣ ರಾಷ್ಟ್ರ ರಾಜಕಾರಣ ಎಲ್ಲ ಒಂದೇ ಅಲ್ವಾ. ಇಲ್ಲಿ ನಾವು ಯಾರನ್ನೂ ತೃಪ್ತಿ ಪಡಿಸೋದಕ್ಕಾಗಲ್ಲ. ನಮಗೂ ಅದರಿಂದ ಮನಸ್ಸಿಗೆ ತೃಪ್ತಿ ಸಿಗಲ್ಲ. ನಾವು ಮಾಡುವ ಕೆಲಸಗಳಿಗೂ ನಿರೀಕ್ಷೆಗಳಿಗೂ ಬಹಳ ದೂರ ಇದೆ. ಹಾಗಾಗಿ ಆ ಭಾವನೆಗೆ ಬಂದಿದ್ದೇನೆ ಎಂದರು.
ಇದನ್ನೂ ಓದಿ:"ನನ್ನೊಂದಿಗೆ ಇರಲು ಬಯಸಿರುವ ಬೆಂಬಲಿಗರು ಬಿಜೆಪಿಯಲ್ಲೇ ಇದ್ದಾರೆ": ಕಾಂಗ್ರೆಸ್ ಸೇರ್ಪಡೆ ಬಗ್ಗೆ ಶಾಸಕ ಸೋಮಶೇಖರ್ ಸ್ಪಷ್ಟನೆ