ಬೆಂಗಳೂರು: ಈ ಬಾರಿ ಬೆಳಗಾವಿ ಸುವರ್ಣ ಸೌಧದಲ್ಲಿ ಡಿಸೆಂಬರ್ 4 ರಿಂದ ನಡೆಯಲಿರುವ ಚಳಿಗಾಲದ ಅಧಿವೇಶನ ಬಾರಿ ಮಹತ್ವ ಪಡೆದುಕೊಂಡಿದೆ. ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್, ಜಂಟಿಯಾಗಿ ಕಾಂಗ್ರೆಸ್ ಸರ್ಕಾರವನ್ನು ಸದನದಲ್ಲಿ ಕಟ್ಟಿಹಾಕಲು ಸಜ್ಜಾಗಿವೆ. ಈ ಸಲ ಬೆಳಗಾವಿ ಅಧಿವೇಶನದ ಕಾವು ಹೆಚ್ಚಾಗುವ ನಿರೀಕ್ಷೆ ಇದೆ. ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮೊನ್ನೆ ಬಿಡದಿಯ ಕೇತಗಾನಹಳ್ಳಿಯಲ್ಲಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಈ ವೇಳೆ ಪ್ರಸ್ತುತ ರಾಜಕೀಯ ವಿದ್ಯಮಾನ, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಹಾಗೂ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದರು. ಇನ್ನು ವಿಷಯಾಧಾರಿತವಾಗಿ ಆಡಳಿತ ಪಕ್ಷ ಕಾಂಗ್ರೆಸ್ ಅನ್ನು ಸದನದೊಳಗೆ ಕಟ್ಟಿಹಾಕಲು ಉಭಯ ನಾಯಕರು ತಮ್ಮ ತಮ್ಮ ಪಕ್ಷದ ಶಾಸಕರನ್ನು ಅಣಿಗೊಳಿಸಲು ಸನ್ನದ್ಧರಾಗಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನವೆಂದರೆ ಉತ್ತರಕರ್ನಾಟಕಕ್ಕೆ ಪ್ರಾತಿನಿಧ್ಯವೆಂದೇ ಬಿಂಬಿತವಾಗಿದೆ. ಈ ನಿಟ್ಟಿನಲ್ಲಿ ಮಿಕ್ಕೆಲ್ಲ ರಾಜಕೀಯ ಕಾರ್ಯಸೂಚಿಗಿಂತ ಅಭಿವೃದ್ಧಿ ಅಜೆಂಡಾಗಳು, ಜನರಿಗೆ ಇನ್ನೂ ಸರಿಯಾಗಿ ತಲುಪದ ಗ್ಯಾರಂಟಿ ಯೋಜನೆಗಳು, ವಿದ್ಯುತ್ ಸಮಸ್ಯೆ, ವರ್ಗಾವಣೆ ಮತ್ತಿತರ ವಿಚಾರಗಳ ಬಗ್ಗೆ ಸದನದೊಳಗೆ ಧ್ವನಿ ಎತ್ತಲು ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಉಭಯ ನಾಯಕರ ಮಧ್ಯೆ ಸಹಮತ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವುದು ಬಿಜೆಪಿಯ ಗುರಿಯಾಗಿದೆ. ದೆಹಲಿ ವರಿಷ್ಠರು ವಿಶೇಷ ಆಸಕ್ತಿ ವಹಿಸಿ, ಜೆಡಿಎಸ್ ಪಕ್ಷವನ್ನು ಎನ್ಡಿಎ ತೆಕ್ಕೆಗೆ ಸೆಳೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಲೋಕಸಭೆ ಚುನಾವಣೆಗೆ ಮೈತ್ರಿ ಸೀಮಿತವಾಗಿಲ್ಲ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಜೊತೆಗೂಡಿ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಿತವಚನ ಬೋಧಿಸಿದ್ದಾರೆ. ಹೀಗಾಗಿ, ಉಭಯ ನಾಯಕರು ಬೆಳಗಾವಿ ಅಧಿವೇಶನಕ್ಕೆ ತಾಲೀಮು ನಡೆಸಿದ್ದಾರೆ.
ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಲಿವೆ. ಆಡಳಿತ ಪಕ್ಷದ ತಪ್ಪುಗಳನ್ನು ದಾಖಲೆ ಸಮೇತ ಎತ್ತಿ ಹಿಡಿಯುತ್ತೇವೆ. ಮೈತ್ರಿ ಸರ್ಕಾರದಲ್ಲಿ ಒಳ್ಳೆಯ ಆಡಳಿತ ನೀಡಿದ್ದು, ಜನ ಈಗಲೇ ಅಂತಹ ಸರ್ಕಾರ ಬಯಸುತ್ತಿದ್ದಾರೆ. 2028-29ರಲ್ಲಿ ಮತ್ತೆ ಅಂಥಹದ್ದೇ ಸರ್ಕಾರ ಕೊಡುವ ಪ್ರಯತ್ನ ಮಾಡುತ್ತೇವೆ. ದೇಶದ ಹಿತದೃಷ್ಟಿಯಿಂದ ಮುಂದಿನ ಅವಧಿಗೂ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಚರ್ಚಿಸಿದ್ದೇವೆ. ಕೇತ್ರ ಹಂಚಿಕೆ ಕುರಿತು ವರಿಷ್ಠರು ಚರ್ಚೆ ನಡೆಸುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದರು.
ಸೀಟು ಹಂಚಿಕೆ ಕುರಿತು ಬಿಜೆಪಿ ವರಿಷ್ಠರು ಮತ್ತು ಕುಮಾರಸ್ವಾಮಿ ದೆಹಲಿಯಲ್ಲಿ ಚರ್ಚಿಸಲಿದ್ದು, ಉಭಯ ಪಕ್ಷಗಳ ಗೆಲುವಿನ ಕಾರ್ಯತಂತ್ರವನ್ನು ಮಾತುಕತೆ ನಡೆಸಿ ತೀರ್ಮಾನ ಮಾಡುತ್ತೇವೆ. ದೇಶ, ರಾಜ್ಯದ ಹಿತದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಒಂದಾಗಿ ಲೋಕಸಭೆ ಚುನಾವಣೆ ಎದುರಿಸಲಿವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಪಾಠ ಕಲಿಸಲು ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದರು.