ಬೆಂಗಳೂರು:ನಿನ್ನೆ 10 ಮಂದಿ ಬಿಜೆಪಿ ಶಾಸಕರ ಅಮಾನತು ಖಂಡಿಸಿ, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಕಲಾಪವನ್ನು ಬಹಿಷ್ಕರಿಸಿದ್ದಾರೆ. ವಿರೋಧ ಪಕ್ಷಗಳ ಗೈರುಹಾಜರಿ ನಡುವೆಯೇ ವಿಧಾನಮಂಡಲದ ಕಲಾಪ ಇಂದು ಆರಂಭಗೊಳ್ಳುವ ಮೂಲಕ ಮತ್ತೊಂದು ಅನಪೇಕ್ಷಣೀಯ ವಿದ್ಯಮಾನ ನಡೆದಿದೆ.
ವಿಧಾನಮಂಡಲದ 30 ವರ್ಷಗಳ ಇತಿಹಾಸದಲ್ಲಿ ಪ್ರತಿಪಕ್ಷಗಳು ಸಂಪೂರ್ಣ ಬಹಿಷ್ಕಾರ ಹಾಕಿ ಅದರ ಬಳಿಕವೂ ಕಲಾಪ ನಡೆದ ಉದಾಹರಣೆ ಇಲ್ಲ. ಪ್ರಜಾಸತ್ತಾತ್ಮಕ ವಿಷಯಗಳಿಗಾಗಿ ಹಲವಾರು ಬಾರಿ ಪ್ರತಿಭಟನೆಗಳಾಗಿವೆ. ಆ ವೇಳೆ ಸಭಾತ್ಯಾಗ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಬಹಿಷ್ಕಾರದಂತಹ ಪ್ರತಿಭಟನೆಗಳು ನಡೆದಿರಲಿಲ್ಲ.
ಜು.18 ರಂದು ಬೆಂಗಳೂರಿನಲ್ಲಿ ನಡೆದ ಇಂಡಿಯಾ ಕೂಟದ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಪಕ್ಷಗಳ ನಾಯಕರ ಆತಿಥ್ಯಕ್ಕೆ ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ನೇಮಿಸಿರುವುದನ್ನು ವಿರೋಧಿಸಿ ಜೆಡಿಎಸ್ ಮತ್ತು ಬಿಜೆಪಿ ನಿನ್ನೆ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಧರಣಿ ಸತ್ಯಾಗ್ರಹ ನಡೆಸಿತ್ತು. ಅದರ ನಡುವೆಯೂ ಕಲಾಪಗಳು ಮುಂದುವರೆದಿದ್ದವು. 5 ವಿಧೇಯಕಗಳು ಅಂಗೀಕಾರಗೊಂಡಿದ್ದವು.
ಭೋಜನಾ ವಿರಾಮಕ್ಕೂ ಬಿಡುವು ನೀಡದೆ ಸಭಾಧ್ಯಕ್ಷರು ವಿತ್ತೀಯ ಮೇಲಿನ ಕಾರ್ಯಕಲಾಪಗಳನ್ನು ಮುಂದುವರೆಸಿದ್ದರು. ಶಾಸಕ ಪಿ. ಎಂ. ನರೇಂದ್ರಸ್ವಾಮಿ ಮಾತನಾಡುತ್ತಿದ್ದ ವೇಳೆ ಸಿಟ್ಟಿಗೆದ್ದ ಧರಣಿ ನಿರತ ವಿರೋಧಪಕ್ಷದ ಶಾಸಕರು ಪೇಪರ್ನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ತೂರಿದ್ದರು.
ಪೀಠದಲ್ಲಿದ್ದ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಪ್ರಯತ್ನಿಸಿದರಾದರೂ ಗಲಾಟೆ ತಹಬದಿಗೆ ಬರಲಿಲ್ಲ. ಈ ವೇಳೆ ಕಲಾಪವನ್ನು ಕೆಲಕಾಲ ಮುಂದೂಡಲಾಯಿತು. ಬಳಿಕ ಸದನ ಸಮಾವೇಶಗೊಂಡಾಗ ಸ್ಪೀಕರ್ ಯು ಟಿ ಖಾದರ್ ಅವರು ಉಪಾಧ್ಯಕ್ಷರ ಮೇಲೆ ಅನುಚಿತ ವರ್ತನೆ ತೋರಿಸಿದ ಬಿಜೆಪಿಯ 10 ಮಂದಿ ಶಾಸಕರನ್ನು ಈ ಅಧಿವೇಶನದ ಮುಗಿಯುವವರೆಗೆ ಮಟ್ಟಿಗೆ ಅಮಾನತುಗೊಳಿಸಿದರು.
ಈ ಕ್ರಮವನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಜೆಡಿಎಸ್ನ ಶಾಸಕರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಧರಣಿ ನಡೆಸುತ್ತಿದ್ದರು. ಪೊಲೀಸರನ್ನು ಬಳಸಿಕೊಂಡು ಅವರನ್ನು ಹೊರಹಾಕಲಾಯಿತು. ಇದನ್ನು ಬಲವಾಗಿ ವಿರೋಧಿಸಿರುವ ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಇಂದು ಬೆಳಗ್ಗೆ ಕಲಾಪಕ್ಕೆ ಗೈರುಹಾಜರಾಗಿದ್ದಾರೆ.
ನಿನ್ನೆ ಬಿಜೆಪಿ ನಾಯಕರು ಹೇಳಿದ ಪ್ರಕಾರ, ಬಾಕಿ ಇರುವ 2 ದಿನದ ಕಲಾಪವನ್ನು ಬಹಿಷ್ಕರಿಸಲು ನಿರ್ಧರಿಸಲಾಗಿದೆ. ಈ ರೀತಿಯ ಬಹಿಷ್ಕಾರ ಇದೇ ಮೊದಲ ಬಾರಿ ಎಂದು ಹೇಳಲಾಗಿದೆ. ಯಾವುದೇ ಗದ್ದಲ, ಕೋಲಾಹಲ ಪರಿಸ್ಥಿತಿ ಇದ್ದರೂ ಕೂಡ ಪ್ರತಿಭಟನಾನಿರತ ಶಾಸಕರು ಕಲಾಪದಲ್ಲಿ ಭಾಗವಹಿಸಿ ಸದನದ ಒಳಗೆ ಹೋರಾಟ ನಡೆಸಿದ ಉದಾಹರಣೆಗಳಿವೆ.
ಅಸಹನೀಯ ಪರಿಸ್ಥಿತಿಯಲ್ಲಿ ಕಲಾಪದಲ್ಲಿ ಸಭಾತ್ಯಾಗ ಮಾಡಿದ ಉದಾಹರಣೆಗಳೂ ಇವೆ. ಆದರೆ ಈ ರೀತಿ ಸಂಪೂರ್ಣ ಬಹಿಷ್ಕಾರ ಹಾಕಿರುವುದು ಮಾತ್ರ ಇದೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ 11.05 ಕ್ಕೆ ಕಲಾಪ ಆರಂಭವಾಗಿದ್ದು, ಸದನದಲ್ಲಿ ಪ್ರತಿಪಕ್ಷದ ಕಡೆಯ ಆಸನಗಳು ಖಾಲಿ, ಖಾಲಿಯಾಗಿದ್ದವು.
ಅದೇ ರೀತಿ ಜೆಡಿಎಸ್ ಸದಸ್ಯರು ಕಲಾಪಕ್ಕೆ ಗೈರಾಗಿದ್ದರು. ಪ್ರತಿಪಕ್ಷದ ಆಸನದ ಕಡೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ, ಶಾಸಕ ಗಾಲಿ ಜನಾರ್ಧನರೆಡ್ಡಿ, ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ ಅವರು ಮಾತ್ರ ಹಾಜರಿದ್ದರು. ಬೆಳಗ್ಗೆ 10.30 ಕ್ಕೆ ಸದನ ಆರಂಭವಾಗಬೇಕಿತ್ತು. ಆದರೆ, ಪ್ರತಿಪಕ್ಷದ ಸದಸ್ಯರು ಬಾರದ ಹಿನ್ನೆಲೆಯಲ್ಲಿ 11.05 ಕ್ಕೆ ಸದನ ಆರಂಭವಾಯಿತು.
ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು ಟಿ ಖಾದರ್ ಅವರು, ರಾಜೀವ್ ಗಾಂಧಿ ಆರೋಗ್ಯ ವಿವಿ ಸೆನೆಟ್ ಗೆ ಸದಸ್ಯರ ನಾಮನಿರ್ದೇಶನ ಮಾಡಲು ಸಭಾಧ್ಯಕ್ಷರಿಗೆ ಅಧಿಕಾರ ನೀಡುವ ಬಗ್ಗೆ ಪ್ರಸ್ತಾಪವನ್ನು ಕೈಗೆತ್ತಿಕೊಂಡರು. ಕಾನೂನು ಸಚಿವ ಎಚ್ ಕೆ ಪಾಟೀಲ್ ಪರವಾಗಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಚುನಾವಣಾ ಪ್ರಸ್ತಾವವನ್ನು ಮಂಡಿಸಿದರು. ನಂತರ ಪ್ರಸ್ತಾಪವನ್ನು ಸದನ ಅಂಗೀಕರಿಸಿತು. ಬಳಿಕ ಬಜೆಟ್ ಮೇಲಿನ ಚರ್ಚೆಯಲ್ಲಿ ಆಡಳಿತ ಪಕ್ಷದ ಶಾಸಕರು ಪಾಲ್ಗೊಂಡಿದ್ದರು.
ಇದನ್ನೂ ಓದಿ:'ಆಷಾಢದ ನಂತರ ಶ್ರಾವಣ ಬರಲಿದೆ': ಬಿಜೆಪಿ ಶಾಸಕರ ಅಮಾನತು ವಿರೋಧಿಸಿ ಸ್ಪೀಕರ್ಗೆ ಪತ್ರ ಬರೆದ ಸುನೀಲ್ ಕುಮಾರ್