ಬೆಂಗಳೂರು:ಮುಂಬರುವ ಚುನಾವಣಾ ರಣಕಣದಲ್ಲಿ ಶೇ 40 ಕಮಿಷನ್, ಪೇ ಸಿಎಂ ಆರೋಪಗಳ ಮೂಲಕ ಬಿಜೆಪಿ ಸರ್ಕಾರವನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿರ್ಧರಿಸಿದೆ. ಬಿಜೆಪಿಯೂ ಇದೀಗ ಪ್ರತಿತಂತ್ರ ರೂಪಿಸುತ್ತಿದೆ. ಕೈ ಪಕ್ಷ, ಅದರಲ್ಲೂ ಸಿದ್ದರಾಮಯ್ಯ ಅವಧಿಯಲ್ಲಿನ ಹಗರಣಗಳನ್ನು ಕೆದಕಲು ಸಜ್ಜಾಗಿದೆ.
ಕಾಂಟ್ರಾಕ್ಟರ್ ಕೆಂಪಣ್ಣ ಅವರ ಕಮಿಷನ್ ಆರೋಪಕ್ಕೆ ಬಿಜೆಪಿ ಜಸ್ಟೀಸ್ ಕೆಂಪಣ್ಣ ಆಯೋಗದ ಅರ್ಕಾವತಿ ರಿ-ಡೂ ಅಕ್ರಮವನ್ನು ಮುಂದಿಟ್ಟಿದೆ. ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ಆರೋಪ ಸಂಬಂಧ ಆಯೋಗದ ವರದಿಯಲ್ಲಿನ ಅಂಶಗಳನ್ನು ಇದೇ ಮೊದಲ ಬಾರಿಗೆ ಸಿಎಂ ಬೊಮ್ಮಾಯಿ ಅಧಿವೇಶನದಲ್ಲಿ ಉಲ್ಲೇಖಿಸಿದ್ದರು. ಅರ್ಕಾವತಿ ಬಡಾವಣೆಯಲ್ಲಿ ಸುಮಾರು 858 ಎಕರೆ ಭೂ ಪ್ರದೇಶವನ್ನು ಡಿನೋಟಿಫೈ ಮಾಡಿರುವ ಬಗ್ಗೆ ಕೆಂಪಣ್ಣ ಆಯೋಗದ ವರದಿಯ ಅಂಶವನ್ನು ಸಿದ್ದರಾಮಯ್ಯ ವಿರುದ್ಧ ಬಳಸಲು ಕಮಲ ಪಕ್ಷ ನಿರ್ಧರಿಸಿದೆ. ಹೈ ಕೋರ್ಟ್, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಭೂ ಮಾಲೀಕರಿಗೆ ಲಾಭ ಮಾಡುವ ಉದ್ದೇಶದಿಂದ ಭೂ ಸ್ವಾಧೀನದಿಂದ ಭೂಮಿ ಕೈಬಿಡಲಾಗಿದೆ ಎಂಬ ವರದಿಯ ಅಂಶವನ್ನು ಜನರ ಮುಂದಿಡಲು ಮುಂದಾಗಿದೆ. 8,000 ಕೋಟಿ ರೂ. ಹಗರಣ ನಡೆದಿದೆ ಎಂಬ ಬ್ರಹ್ಮಾಸ್ತ್ರ ಹೂಡಲು ಸಜ್ಜಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿಯೂ ಸಿಎಂ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಕಾಂಗ್ರೆಸ್ ಹೇಗೆ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿ ರಚಿಸುವ ಮೂಲಕ ತಮ್ಮ ನಾಯಕರ ಮೇಲಿನ ಭ್ರಷ್ಟಾಚಾರ ಮುಚ್ಚುವ ಕೆಲಸ ಮಾಡಿತು ಎಂಬ ಬಗ್ಗೆ ಅಂಕಿಅಂಶ ಸಮೇತ ಪ್ರತ್ಯಾಮ್ಲೀಯ ಹೂಡಲು ಬಿಜೆಪಿ ಮುಂದಾಗಿದೆ. ಲೋಕಾಯುಕ್ತ ಮುಚ್ಚುವ ಮೂಲಕ ಸಿದ್ದರಾಮಯ್ಯ ಸರ್ಕಾರ ಇಡೀ ವ್ಯವಸ್ಥೆಯನ್ನು ಭ್ರಷ್ಟಾಚಾರವನ್ನಾಗಿ ಬದಲಾವಣೆ ಮಾಡಿತು ಎಂಬ ಅಂಶದೊಂದಿಗೆ ಕೌಂಟರ್ ನೀಡುತ್ತಿದೆ. ಹೈ ಕೋರ್ಟ್ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆ ಮರುಸ್ಥಾಪನೆ ಮಾಡಿದ ಆದೇಶದಲ್ಲಿನ ಅಂಶವನ್ನು ಜನರಿಗೆ ಮನವರಿಕೆ ಮಾಡಲು ಮುಂದಾಗಿದೆ.