ಬೆಂಗಳೂರು :ಮಿಷನ್ 150 ಭಾಗವಾಗಿ ನಾಳೆಯಿಂದ ರಾಜ್ಯ ಬಿಜೆಪಿಯ ಮಹತ್ವಾಕಾಂಕ್ಷೆಯ ಬೂತ್ ವಿಜಯ್ ಅಭಿಯಾನ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ 10 ದಿನಗಳಲ್ಲಿ 50 ಲಕ್ಷ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸುವ ಗುರಿಯನ್ನು ಭಾರತೀಯ ಜನತಾ ಪಕ್ಷ ಹಾಕಿಕೊಂಡಿದೆ. ಮುಖ್ಯಮಂತ್ರಿ ಸೇರಿದಂತೆ ಎಲ್ಲ ಸಚಿವರು, ಶಾಸಕರು, ಸಂಸದರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥನ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಬೂತ್ ವಿಜಯ ಅಭಿಯಾನ ಮಾಡುತ್ತಿದ್ದೇವೆ. ಜನವರಿ 2 ರಿಂದ 12 ರವರೆಗೂ ಅಭಿಯಾನ ನಡೆಸುತ್ತೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಬಿಜೆಪಿ ಸಂಘಟನಾತ್ಮಕ 39 ಜಿಲ್ಲೆ, 312 ಮಂಡಲ, 1445 ಮಹಾಶಕ್ತಿ ಕೇಂದ್ರ, 11,642 ಶಕ್ತಿಕೇಂದ್ರ, 58186 ಬೂತ್‌ಗಳಲ್ಲಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಇನ್ನು, ಮಂಗಳೂರಿನಲ್ಲಿ ನಳೀನ್ ಕುಮಾರ್ ಕಟೀಲ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಸಿಎಂ ಬೊಮ್ಮಾಯಿ ಬೆಂಗಳೂರಿನ ಶಿವಾಜಿನಗರದಿಂದ ಅಭಿಯಾನಕ್ಕೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಶಾಸಕರು, ಸಂಸದರು, ಬಿಜೆಪಿ ನಾಯಕರು ವಿಶೇಷ ಅಭಿಯಾನದಲ್ಲಿ ಭಾಗಿಯಾಗಿ ಚಾಲನೆ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
20ಲಕ್ಷ ಕಾರ್ಯಕರ್ತರು ಭಾಗಿ.. ಈ ಅಭಿಯಾನದಲ್ಲಿ 20 ಲಕ್ಷ ಕಾರ್ಯಕರ್ತರು ಕೆಲಸ ಮಾಡುತ್ತಾರೆ, ಬೂತ್ ಸಮಿತಿಯನ್ನು ಪರಿಶೀಲನೆ ನಡೆಸುವುದು, ಪೇಜ್ ಪ್ರಮುಖರ ನಿಯುಕ್ತಿಗೊಳಿಸುವುದು, ವಾಟ್ಸ್ ಆ್ಯಪ್ ಗ್ರೂಪ್ ಕ್ರಿಯೇಟ್ ಮಾಡುವುದು, 50 ಲಕ್ಷ ಮನೆ ಮೇಲೆ ಬಿಜೆಪಿ ಧ್ವಜ ಹಾರಿಸುವುದು, ಪ್ರಧಾನಿಯವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಜನತೆಗೆ ತಲುಪಿಸುವುದು ಬೂತ್ ವಿಜಯ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.
ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಮಾಡಿದ ಅಮಿತ್ ಶಾ ಅವರು ನಮ್ಮ ಕಾರ್ಯಕರ್ತರಲ್ಲಿ ಶಕ್ತಿ ತುಂಬಿದ್ದಾರೆ. ಈ ಅಭಿಯಾನಕ್ಕೆ ವಿಶೇಷ ತಂಡ ರಚನೆಯಾಗಿದೆ. ಕೋಟಾ ಶ್ರೀನಿವಾಸ್ ಪೂಜಾರಿ ಅಭಿಯಾನದ ಸಂಚಾಲಕರಾಗಿ ಕೆಲಸ ಮಾಡಲಿದ್ದಾರೆ. ಮಹೇಶ್ ಟೆಂಗಿನಕಾಯಿ ಸಹಸಂಚಾಲಕರಾಗಿದ್ದಾರೆ. ಪರಿಷತ್ ಸದಸ್ಯ ಕೇಶವ್ ಪ್ರಸಾದ್, ಹೇಮಲತಾ ನಾಯಕ್, ಅರುಣ್ ಶಹಾಪೂರ್ ತಂಡದ ಸದಸ್ಯರಾಗಿದ್ದಾರೆ.ಮಿಷನ್ 150 ಗೆ ಪೂರಕವಾಗಿ ಈ ಅಭಿಯಾನ ನಡೆಯಲಿದ್ದು, ಮೋದಿ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ. ಜನ ಸ್ವಯಂಪ್ರೇರಿತವಾಗಿ ಬಿಜೆಪಿ ಧ್ವಜ ಹಾರಿಸಲಿದ್ದಾರೆ. ಯಾರ ಮೇಲೂ ಕೂಡ ಒತ್ತಡ ಹೇರುವುದಿಲ್ಲ ಜನ ಸ್ವಯಂಪ್ರೇರಿತರಾಗಿ ಧ್ವಜ ಹಾರಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಹಳೇಮೈಸೂರು ಭಾಗದಲ್ಲಿ ನಾಯಕರ ಹೊಂದಾಣಿಕೆ ಕೊರತೆಯಿಂದ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಟೆಂಗಿನಕಾಯಿ, ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ, ಕಾರ್ಯಯೋಜನೆಯ ಬಗ್ಗೆ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಮತ್ತು ಅಧ್ಯಕ್ಷರ ನೇತೃತ್ವದಲ್ಲಿ ಎಲ್ಲವನ್ನೂ ಸರಿದೂಗಿಸುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ನಂತರ ಜೆಡಿಎಸ್ ಜೊತೆ ಮೈತ್ರಿಯಿಲ್ಲ ಎಂಬ ಅಮಿತ್ ಶಾ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದ ನಿಲುವನ್ನು ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ. ಮಿಷನ್ 150 ರ ಅಡಿಯಲ್ಲಿ ಯಾವುದೇ ಪಕ್ಷದ ಜೊತೆಗೆ ಮೈತ್ರಿ ಇಲ್ಲ ಎಂಬ ಸಂದೇಶ ರವಾನೆಯಾಗಿದೆ. ಬಿಜೆಪಿ ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಅದೇ ರೀತಿ ಬಿಜೆಪಿ ಮುಂದುವರೆಯಲಿದೆ ಎಂದು ತಿಳಿಸಿದರು.
ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರ ವಿರುದ್ಧ ಅಮಿತ್ ಶಾ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡುತ್ತಾ, ಅಮಿತ್ ಶಾ ಅವರು ದೇವೇಗೌಡರ ಬಗ್ಗೆ ವೈಯಕ್ತಿಕವಾಗಿ ಏನೂ ಹೇಳಿಲ್ಲ, ಜೆಡಿಎಸ್ ಜೊತೆ ಮೈತ್ರಿ ಇಲ್ಲ ಅಂತ ಮಾತ್ರ ಹೇಳಿದ್ದಾರೆ. ಅಮಿತ್ ಶಾ ನೀಡಿದ ಸೂಚನೆಯಂತೆ ಬಿಜೆಪಿ ಮುಂದುವರೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ :ಜ.2ರಿಂದ ಬೂತ್ ವಿಜಯ ಅಭಿಯಾನ, 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಗುರಿ