ಕರ್ನಾಟಕ

karnataka

ETV Bharat / state

'ಬೇನಾಮಿ ಅಧ್ಯಕ್ಷೆ-ಮಹಾನಾಯಕ' ಸೃಷ್ಟಿಸಿದ ಮಹಾಕೈವಾಡವೇ.. ಸಂತೋಷ್ ಕೇಸ್‌ ಕಾಂಗ್ರೆಸ್ ಟೂಲ್ ಕಿಟ್ ಭಾಗ : ಬಿಜೆಪಿ ಆರೋಪ - Bjp allegation on congress party

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಕುರಿತು ಕಾಂಗ್ರೆಸ್​ ಮೇಲೆ ಅನುಮಾನ ವ್ಯಕ್ತಪಡಿಸಿರುವ ಬಿಜೆಪಿ ಸರಣಿ ಟ್ವೀಟ್ ಮಾಡಿದೆ. ಅಘೋಷಿತ ಕೆಪಿಸಿಸಿ ಅಧ್ಯಕ್ಷೆಯ ಕ್ಷೇತ್ರದಲ್ಲಿ ನಡೆದ ಬೇನಾಮಿ ಕಾಮಗಾರಿಗೆ ಕಾಂಗ್ರೆಸ್ ಮಾಜಿ ಕಾರ್ಯಕರ್ತ ಬಲಿಯಾದರೆ? ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳರ್ ವಿರುದ್ಧ ಬಿಜೆಪಿ ಬೆರಳು ಮಾಡಿದೆ..

ಬಿಜೆಪಿ ಕಚೇರಿ
ಬಿಜೆಪಿ ಕಚೇರಿ

By

Published : Apr 13, 2022, 4:48 PM IST

ಬೆಂಗಳೂರು :ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವಿಗೆ ನ್ಯಾಯ ಸಿಗಲೇಬೇಕು. ನ್ಯಾಯದ ಜೊತೆಗೆ ಸಾವಿನ ಹಿಂದಿರುವ ರಹಸ್ಯಗಳಿಗೂ ಉತ್ತರ ಸಿಗಬೇಕು. ಮೃತ ಸಂತೋಷ್ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಇದೇ ವಿಷಯವಾಗಿ ಪತ್ರಿಕಾಗೋಷ್ಠಿ ನಡೆಸಿದ್ದರು. ಇದು ಕಾಕತಾಳಿಯವಾಗಲು ಹೇಗೆ ಸಾಧ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.

40 ಪರ್ಸೆಂಟ್ ಕಾಂಗ್ರೆಸ್ ಟೂಲ್​ಕಿಟ್ ಹ್ಯಾಷ್ ಟ್ಯಾಗ್​ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನ ಸೃಷ್ಟಿಯಾಗಿದೆ. ಇದು ಕಾಂಗ್ರೆಸ್ ಪಕ್ಷದ "ಬೇನಾಮಿ ಅಧ್ಯಕ್ಷೆ" ಹಾಗೂ "ಮಹಾನಾಯಕ" ಸೃಷ್ಟಿಸಿದ "ಮಹಾಕೈವಾಡವೇ?. ಅಘೋಷಿತ ಕೆಪಿಸಿಸಿ ಅಧ್ಯಕ್ಷೆಯ ಕ್ಷೇತ್ರದಲ್ಲಿ ನಡೆದ ಬೇನಾಮಿ ಕಾಮಗಾರಿಗೆ ಕಾಂಗ್ರೆಸ್ ಮಾಜಿ ಕಾರ್ಯಕರ್ತ ಬಲಿಯಾದರೆ? ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳರ್ ವಿರುದ್ಧ ಬಿಜೆಪಿ ಬೆರಳು ಮಾಡಿದೆ.

40% ಕಮಿಷನ್ ಆರೋಪ ಕಾಂಗ್ರೆಸ್ ಪಕ್ಷ ಸೃಷ್ಟಿಸಿದ ಬಹುದೊಡ್ಡ ಟೂಲ್ ಕಿಟ್. ಈ ಷಡ್ಯಂತ್ರವನ್ನು ಪೋಷಿಸುವುದಕ್ಕಾಗಿ ಕಾಂಗ್ರೆಸ್ ಖಳನಾಯಕರು ಮಗದೊಂದು ಪ್ರಹಸನ ಹೆಣೆದರೇ?. ಸಾವಿನ ರಾಜಕಾರಣಕ್ಕೆ ಕಾಂಗ್ರೆಸ್ ಮುನ್ನುಡಿ ಬರೆಯುತ್ತಿದೆಯೇ?. ಅನುಮೋದನೆ ಇಲ್ಲದೆಯೇ ನೂರಕ್ಕೂ ಹೆಚ್ಚು ಕಾಮಗಾರಿ ನಡೆಸಿದ್ದ ಸಂತೋಷ್, ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಯಲ್ಲಿ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಿಂದ ಸ್ಪಷ್ಟನೆ ಹಾಗೂ ಅನಧಿಕೃತ ಕಾಮಗಾರಿಯ ಹಿಂದೆ ಕೆಪಿಸಿಸಿಯ "ಅಘೋಷಿತ ಅಧ್ಯಕ್ಷೆಯ" ಪಾತ್ರವೇನು? ಎಂದು ಪ್ರಶ್ನಿಸಿದೆ.

ಕೇಂದ್ರದ ನಾಯಕರ, ಮಂತ್ರಿಗಳ, ಅಧಿಕಾರಿಗಳ ಬಳಿಗೆ ತೆರಳಿ ದೂರು ಸಲ್ಲಿಸುವಷ್ಟು ಧೈರ್ಯವಿದ್ದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮೆತ್ತಗಿನ ಮನುಷ್ಯನೇ?. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಅರಾಜಕತೆ ಸೃಷ್ಟಿಸಲು ಮುಗ್ಧರನ್ನು ಕಾಂಗ್ರೆಸ್ ನಾಯಕರು ಬಳಸಿಕೊಳ್ಳುತ್ತಿದ್ದಾರೆಯೇ? ಸಂತೋಷ್ ಪ್ರಕರಣ ಕಾಂಗ್ರೆಸ್ ಟೂಲ್ ಕಿಟ್ ಭಾಗ ಎಂಬುದಕ್ಕೆ ಹಲವಾರು ದೃಷ್ಟಾಂತಗಳಿವೆ.

ಸಂತೋಷ್ ಪಾಟೀಲ್ ಮೂಲತಃ ಕಾಂಗ್ರೆಸ್ ಕಾರ್ಯಕರ್ತ, ಸಂತೋಷನಿಂದ ರಾಹುಲ್ ಗಾಂಧಿ ಸಹಿ ನಕಲು, 40% ಕಮಿಷನ್ ಕಾಂಗ್ರೆಸ್ ಸೃಷ್ಟಿ, ಸಂತೋಷ್ ಪಾಟೀಲ್‌ನಿಂದಲೂ 40% ಕಮಿಷನ್ ಪ್ರಸ್ತಾಪವಾಗಿದೆ ಎಂದು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ಸಂತೋಷ್ ಪ್ರಕರಣ ಕಾಂಗ್ರೆಸ್ ಟೂಲ್ ಕಿಟ್ ಭಾಗ ಎಂಬುದಕ್ಕೆ ಹಲವಾರು ದೃಷ್ಟಾಂತಗಳಿವೆ. ಕಾರ್ಯಾದೇಶ ಇಲ್ಲದೇ ಕಾಮಗಾರಿ, ಕೆಪಿಸಿಸಿ ಅಘೋಷಿತ ಅಧ್ಯಕ್ಷೆಯ ಕ್ಷೇತ್ರದಲ್ಲಿ ಕಾಮಗಾರಿ, ಈಗ ಮೃತನ ಪರ ಬ್ಯಾಟಿಂಗ್, ಮೃತ ವ್ಯಕ್ತಿಯ ಎಲ್ಲಾ ವಿಚಾರಗಳು "ಮಹಾನಾಯಕ” ಮತ್ತು “ಬೇನಾಮಿ ಅಧ್ಯಕ್ಷೆಯ” ಸುತ್ತ ಸುತ್ತುತ್ತಿರುವುದು ನಿಜವಲ್ಲವೇ?

ಮೃತ ಸಂತೋಷ್ ಈ ಹಿಂದೆ ರಾಹುಲ್ ಗಾಂಧಿ ಸಹಿ ನಕಲು ಮಾಡಿದ್ದು ನಿಜವೇ? ಈ ಕಾರಣಕ್ಕಾಗಿ ಆತನನ್ನು ಕಾಂಗ್ರೆಸ್ಸಿನಿಂದ ಉಚ್ಛಾಟನೆ ಮಾಡಿದ್ದು ಸುಳ್ಳೇ?, ಆತ ಕಾಂಗ್ರೆಸ್ಸಿನ "ಬೇನಾಮಿ ಅಧ್ಯಕ್ಷರಿಗೆ ನಿಷ್ಠನಾಗಿದ್ದದ್ದು ಸುಳ್ಳೇ?, ಇದು "ಬೇನಾಮಿ ಅಧ್ಯಕ್ಷೆ ಹಾಗೂ "ಮಹಾನಾಯಕ” ಪೋಣಿಸಿರುವ ಷಡ್ಯಂತ್ರವೇ? ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.

ಓದಿ:ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ : ಮೊದ್ಲು ಸಚಿವರ ರಾಜೀನಾಮೆ ಪಡೆದು ಪ್ರಾಥಮಿಕ ತನಿಖೆ ಮಾಡಿ ಎಂದ ಜಿ. ಪರಮೇಶ್ವರ್​

ABOUT THE AUTHOR

...view details