ಬೆಂಗಳೂರು: ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ 40 ಪರ್ಸೆಂಟ್ ಕಮೀಷನ್ ಸರ್ಕಾರ ಎಂಬ ಆರೋಪ ಮಾಡಿದ್ದ ಕಾಂಗ್ರೆಸ್, ಇದೀಗ ಅದರ ವಿರುದ್ಧವೇ ಬಿಜೆಪಿಯೂ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಬಿಬಿಎಂಪಿಯಲ್ಲಿ ಶೇ.85ರಷ್ಟು ಡೀಲ್ ನಡೆದಿರುವ ಕುರಿತಾಗಿ ಆರೋಪ ಮಾಡಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ವಿರುದ್ಧ ಬಿಜೆಪಿ ಡೀಲ್ ಆರೋಪದ ಟ್ವೀಟ್ ಮಾಡಿದೆ.
ನಗರದ ಶಾಂಗ್ರಿಲಾ ಹೋಟೆಲ್‌ನಲ್ಲಿ ಕಾಂಗ್ರೆಸ್ ಸರ್ಕಾರದ ಗೌಪ್ಯ ಸಭೆಯ ರಹಸ್ಯವೇನು? ರಾಜ್ಯ ಸರಕಾರದೊಟ್ಟಿಗಾಗಲಿ, ಬಿಬಿಎಂಪಿ ಒಟ್ಟಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲರಿಗೆ ಬಿಬಿಎಂಪಿ ಉನ್ನತ ಅಧಿಕಾರಿಗಳೊಟ್ಟಿಗೇನು ಕೆಲಸ? ಇದು 85% ಡೀಲ್ ಫಿಕ್ಸಿಂಗ್ ಸಭೆಯೇ? ಎಂದು ಟ್ವಿಟರ್‌ನಲ್ಲಿ ಬಿಜೆಪಿ ರಾಜ್ಯ ಘಟಕ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದೆ.
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ 40 ಪರ್ಸೆಂಟ್ ಕಮೀಷನ್ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿತ್ತು. ಪೇ ಸಿಎಂ ಅಭಿಯಾನದ ಮೂಲಕ ಬಿಜೆಪಿ ಸರ್ಕಾರವನ್ನು ಟೀಕಿಸಿತ್ತು. ಇದು ದೇಶವ್ಯಾಪಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಇದೀಗ ಬಿಜೆಪಿಯೂ ಈ ಹಿಂದೆ ಕಾಂಗ್ರೆಸ್ ಮಾಡಿದ್ದ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಆರಂಭಿಕ ಹಂತವಾಗಿ ರಣದೀಪ್ ಸುರ್ಜೇವಾಲಾ ವಿರುದ್ಧ ಆರೋಪ ಮಾಡಿದ್ದು ಮುಂದಿನ ದಿನಗಳಲ್ಲಿ ಸರಣಿ ಆರೋಪ ಮಾಡುವ ಲೆಕ್ಕಾಚಾರದಲ್ಲಿದೆ.
ಕನ್ನಡಿಗರು ಮತ ಹಾಕಿದ್ದು ಕೈಗೊಂಬೆ ಸರಕಾರಕ್ಕಾ?-ಎಚ್ಡಿಕೆ:ರಾಜ್ಯದಲ್ಲಿರುವುದು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವೋ? ಅಥವಾ ದಿಲ್ಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರಕಾರಕ್ಕಾ? ಅಥವಾ ಕೈಗೊಂಬೆ ಸರಕಾರಕ್ಕಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪಾಪ, ಜನರ ವೋಟು ಹಂಗಿನ ಸರ್ಕಾರದ ಪಾಲಾಗಿದೆ. ಸರ್ಕಾರಕ್ಕೆ ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ ಎಂದು ಟೀಕಿಸಿದ್ದಾರೆ. ಸರ್ಕಾರದ ಅಧಿಕೃತ ಸಭೆಗಳನ್ನು ಹೈಕಮಾಂಡಿನ ನಿಲಯದ ಕಲಾವಿದರೇ ನಡೆಸುವ ಕರ್ಮ ಕರ್ನಾಟಕದ್ದು. ನಾನು ಟ್ಯಾಗ್ ಮಾಡಿರುವ ಫೋಟೋ ಆ ದೈನೇಸಿ ಸ್ಥಿತಿಗೆ ಸಾಕ್ಷಿ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರಿಗೆ ಸರ್ಕಾರದ ಸಭೆಗಳನ್ನು ನಡೆಸುವ ಜವಾಬ್ದಾರಿ, ಅವಕಾಶ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.
ಸಭೆಯಲ್ಲಿ ಹಿರಿಯ ಸಚಿವರಿದ್ದಾರೆ. ಹಿರಿಯ ಐಎಎಸ್ ಅಧಿಕಾರಿಗಳೂ ಹಾಜರಿದ್ದಾರೆ. ಅಲ್ಲಿಗೆ ಇದು ಅಧಿಕೃತ ಸಭೆಯೇ ಆಯಿತು. ಆದರೆ, ಅಲ್ಲಿ ಸುರ್ಜೆವಾಲಾ ಸೆಂಟರ್ ಸೀಟಿನಲ್ಲಿದ್ದಾರೆ. ಸಚಿವರು ಸೈಡು ಕುರ್ಚಿಗಳ ಪಾಲಾಗಿದ್ದಾರೆ. ಇದೇನು ವಿಚಿತ್ರ? ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಬಿಜೆಪಿ ಆಡಳಿತದಲ್ಲಿ 40% ಕಮಿಷನ್ದ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ಹಲವಾರು ಬಾರಿ ಕಿಡಿಕಾರಿದ್ದರು. ಭ್ರಷ್ಟ, ನೈತಿಕತೆ ಇಲ್ಲದ ಬಿಜೆಪಿ ಪಕ್ಷ ಶಾಸಕರನ್ನು ಹರಾಜಿನಲ್ಲಿ ಖರೀದಿಸಿ ಆಡಳಿತಕ್ಕೆ ಬಂದ ಸರ್ಕಾರ, ಗುತ್ತಿಗೆದಾರರು 40 ಪರ್ಸೆಂಟೇಜ್ ಕಮಿಷನ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದರೂ ಮೌನವಾಗಿರುವುದು ಯಾಕೆ ಎಂದು ಹಲವಾರು ಪಕ್ಷದ ವೇದಿಕೆಗಳಲ್ಲಿ ಪ್ರಶ್ನಿಸಿದ್ದರು. ಆದರೆ ಈಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ವಿರುದ್ದ ಬಿಜೆಪಿ ಡೀಲ್ ಆರೋಪವನ್ನು ಟ್ವಿಟರ್ದಲ್ಲಿ ಪ್ರಕಟಿಸಿ ತಿರುಗೇಟು ನೀಡಿದೆ.
ಇದನ್ನೂಓದಿ:ಲಿಂಗಾಯತರಿಗೆ ಸೂಕ್ತ ಸ್ಥಾನಮಾನ ಕೊಟ್ಟಿಲ್ಲ ಎನ್ನುವುದು ಸರಿಯಲ್ಲ: ಕೇಂದ್ರ ಸಚಿವ ಭಗವಂತ ಖೂಬಾ