ಚಾಮರಾಜನಗರ/ ಕಾರವಾರ/ ವಿಜಯಪುರ/ ಬೆಳಗಾವಿ/ ಹೊಸಕೋಟೆ ಆರ್ಆರ್ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಈ ಹಿನ್ನಲೆಯಲ್ಲಿ ವಿವಿಧೆಡೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ರಾಜ್ಯದ ಉಪಚುನಾವಣೆ ಹಾಗೂ ಬಿಹಾರದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿರುವುದರಿಂದ ಚಾಮರಾಜನಗರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿಂದು ವಿಜಯೋತ್ಸವ ಆಚರಿಸಿದರು. ಪಕ್ಷದ ಕಚೇರಿಯಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆಯಲ್ಲಿ ಬಂದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪಗೆ ಜಯ ಘೋಷಗಳನ್ನು ಕೂಗಿದ್ದಾರೆ.
ಬಿಹಾರ ರಾಜ್ಯ ಸೇರಿದಂತೆ ಗುಜರಾತ್, ಮಧ್ಯ ಪ್ರದೇಶ ಹಾಗೂ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.