ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಬಿಎಂಆರ್ ಡಿಎ) ವ್ಯಾಪ್ತಿಯಲ್ಲಿನ ಅನಧಿಕೃತ ಬಡಾವಣೆಗಳ ಹಾಗೂ ಭೂ ಉಪಯೋಗ ಉಲ್ಲಂಘನೆ ಆಗುತ್ತಿರುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವ ಕುರಿತು ಸಿಎಂಗೆ ಮನವಿ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟ್ಟಸ್ವಾಮಿ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ಹಾಗೂ ಭೂ ಉಪಯೋಗ ಬದಲಾವಣೆ ಮತ್ತು ಬೆಂಗಳೂರಿನ ಸಿಡಿಪಿ ಪ್ಲ್ಯಾನ್ ಉಲ್ಲಂಘಿಸಿ, ಅನಧಿಕೃತ ಬಡಾವಣೆಗಳು ಬರುತ್ತಿರುವುದನ್ನು ಗಮನಿಸಿ ಮುಖ್ಯಮಂತ್ರಿಗಳೊಡನೆ ಚರ್ಚಿಸಿದ್ದೇನೆ. ಅವರ ಆದೇಶದಂತೆ ಅಂತಹ ಅನಧಿಕೃತ ಬಡಾವಣೆಗಳ ವಿವರವನ್ನು ಬಿಡಿಎ ದಿಂದ ಮತ್ತು ಬಿಎಂಆರ್ ಡಿಎ ದಿಂದ ಪಡೆಯಲಾಗಿದೆ ಎಂದರು.
ಬೆಂಗಳೂರಲ್ಲಿ ಅಕ್ರಮ ಬಡಾವಣೆಗಳಿವೆ ಎಂದು ಬಿಡಿಎ ಹಾಗೂ ಬಿಎಂಆರ್ ಡಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಬೆಂಗಳೂರು ನಗರವನ್ನು ಯೋಜನಾ ಬದ್ಧವಾಗಿ ನಿರ್ಮಿಸುವುದು, ಇಲ್ಲಿನ ನಾಗರಿಕರಿಗೆ ಮನೆಗಳನ್ನು ಹಂಚುವುದು, ನೂತನ ಬಡಾವಣೆ ನಕ್ಷೆ ತಯಾರಿಸುವುದು ಸೇರಿದಂತೆ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಇತರೆ ವಿಚಾರಗಳು ಬಿಡಿಎ ಉದ್ದೇಶವಾಗಿದೆ. ಆದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಮಾಹಿತಿಯಂತೆ 172 ಖಾಸಗಿಯವರಿಗೆ ಮತ್ತು ಸಂಸ್ಥೆಗಳಿಗೆ 3109 ಎಕರೆ 27 ಗುಂಟೆ ಜಮೀನಿನಲ್ಲಿ ಭೂ ಪರಿವರ್ತನೆ, ಭೂ ಬದಲಾವಣೆ ಮತ್ತು ಸಿಡಿಪಿ ನಕ್ಷೆಯನ್ನು ಉಲ್ಲಂಘಿಸಿ ಬಡಾವಣೆಗಳನ್ನು ನಿರ್ಮಿಸಿ, ನಿವೇಶನಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಬಾಬ್ತು 352.72 ಕೋಟಿ ರೂ. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯನ್ನು ವಂಚಿಸಲಾಗಿದೆ. ಈ ಮೊತ್ತದಲ್ಲಿ ಭೂ ಪರಿವರ್ತನೆ ಹಾಗೂ ಇತರೆ ತೆರಿಗೆಗಳು ಸೇರಿದರೆ ತೆರಿಗೆ ವಂಚನೆಯ ಅಂದಾಜು ಮೊತ್ತ ಸುಮಾರು 500 ಕೋಟಿ ರೂ. ಬರಬೇಕಿದೆ ಎಂದು ಹೇಳಿದರು.