ಬೆಂಗಳೂರು: ಬಿಟ್ ಕಾಯಿನ್ ಹಗರಣದ ಮರು ತನಿಖೆ ಆರಂಭಿಸಿರುವ ಸಿಐಡಿಯ ವಿಶೇಷ ತನಿಖಾ ತಂಡ (ಎಸ್ಐಟಿ) ಬೆಂಗಳೂರಿನ 7 ಕಡೆಗಳಲ್ಲಿ ದಾಳಿ ನಡೆಸಿ, ಶೋಧ ಆರಂಭಿಸಿದೆ. ನಗರದ ಬೊಮ್ಮನಹಳ್ಳಿ, ಕೋರಮಂಗಲ ಸೇರಿದಂತೆ ಈ ಹಿಂದೆ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿದ್ದ ಐವರು ಅಧಿಕಾರಿಗಳಿಗೆ ಸಂಬಂಧಿಸಿದಂತೆ ಏಳು ಕಡೆಗಳಲ್ಲಿ ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್- ಇಬ್ಬರ ಬಂಧನ:ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ 11.5 ಕೋಟಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಂಚಿಸಿದ ಹಣ ವರ್ಗಾವಣೆಯಾದ ಖಾತೆಗಳ ಮೂಲ ಬೆನ್ನಟ್ಟಿದ ಸಿಐಡಿಯ ವಿಶೇಷ ತನಿಖಾ ತಂಡ ನಾಗಪುರ ಮೂಲದ ನಿತಿನ್ ಮೆಶ್ರಾಮ್ ಮತ್ತು ದರ್ಶಿತ್ ಪಟೇಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಗೆ ಆರೋಪಿ, ಹ್ಯಾಕರ್ ಶ್ರೀಕಿ ಜೊತೆ ನಂಟಿರುವುದು ಪತ್ತೆಯಾಗಿದೆ.
ಪ್ರಕರಣದ ಹಿನ್ನೆಲೆ: 2019 ರಲ್ಲಿ ರಾಜ್ಯ ಸರ್ಕಾರದ ಇ - ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ 11.5 ಕೋಟಿ ರೂಪಾಯಿ ವಂಚಿಸಲಾಗಿತ್ತು. ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಆ ಹಣವನ್ನು ಉತ್ತರ ಭಾರತದ ಕೆಲ ವ್ಯಕ್ತಿಗಳ ಖಾತೆಗೆ ಹಾಕಿದ್ದ. ಅಲ್ಲದೇ ಆ ಹಣವನ್ನು ಹವಾಲ ಮೂಲಕ ವರ್ಗಾವಣೆ ಮಾಡಲಾಗಿತ್ತು. ಆರೋಪಿಗಳು ಬೆಂಗಳೂರಿಗೆ ಹವಾಲ ರೂಪದಲ್ಲಿ ಹಣ ತಲುಪಿಸಿದ್ದರು.
ಇದನ್ನೂ ಓದಿ:ಬಿಟ್ ಕಾಯಿನ್ ಪ್ರಕರಣದ ತನಿಖೆಗೆ ತಜ್ಞರ ತಂಡ, ಸೇವಾಶುಲ್ಕ ಭರಿಸಲು ಗರಿಷ್ಠ ₹50 ಲಕ್ಷ ಮಿತಿ