ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಬಿಟ್ ಕಾಯಿನ್ ವಿವಾದ ಬಿಜೆಪಿ ಕೊರಳಿಗೆ ಸುತ್ತಿಕೊಳ್ಳುತ್ತಿರುವ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಮುಂದಾಗಿದ್ದಾರೆ. ಬಿಟ್ ಕಾಯಿನ್ ವಿವಾದ ಕುರಿತಂತೆ ಪ್ರಧಾನಿ ಬಳಿಯೇ ಸಿಎಂ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ನವದೆಹಲಿಗೆ ತೆರಳುವ ಮುನ್ನ ಆರ್ಟಿ ನಗರ ನಿವಾಸದಲ್ಲಿ ಮಾತನಾಡಿದ ಅವರು, ಇಂದು ನವದೆಹಲಿಗೆ ತೆರಳುತ್ತಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಆಗಲಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮಯವನ್ನೂ ಕೇಳಿದ್ದೇನೆ, ನಾಳೆ ಸಮಯ ಸಿಗುವ ನಿರೀಕ್ಷೆ ಇದೆ ಎಂದರು.
ಪ್ರಧಾನಿ ಮೋದಿ ಭೇಟಿಗೆ ಮುಂದಾದ ಸಿಎಂ ಬೊಮ್ಮಾಯಿ ಕೇಂದ್ರ ಸಚಿವರನ್ನ ಭೇಟಿಯಾಗಿ ರಾಜ್ಯದ ಯೋಜನೆಗಳ ಬಗ್ಗೆ ಚರ್ಚಿಸುತ್ತೇನೆ ಮತ್ತು ವಿಶೇಷವಾಗಿ ನಮ್ಮ ಅಂತಾರಾಜ್ಯ ಜಲವಿವಾದ ಕುರಿತು ವಕೀಲರ ಜೊತೆಯಲ್ಲಿಯೂ ಚರ್ಚೆ ಮಾಡಲಿದ್ದೇನೆ. ಕೃಷ್ಣ ಮತ್ತು ಕಾವೇರಿ ನದಿ ಎರಡು ವಿಚಾರದಲ್ಲಿ ಸುಪ್ರೀಂಕೋರ್ಟ್ನಲ್ಲಿರುವ ಪ್ರಕರಣಗಳ ಪ್ರಗತಿ ಪರಿಶೀಲಿಸಿ ಚರ್ಚೆ ನಡೆಸುತ್ತೇನೆ. ಜೊತೆಗೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದು, ನಾಳೆ ಸಂಜೆ ಬೆಂಗಳೂರಿಗೆ ವಾಪಸಾಗಲಿದ್ದೇನೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸಮಯವನ್ನು ಕೇಳಿದ್ದೇನೆ, ಸಮಯಾವಕಾಶ ಸಿಕ್ಕರೆ ಎಲ್ಲರನ್ನೂ ಭೇಟಿಯಾಗುತ್ತೇನೆ. ಸಂಪುಟ ವಿಸ್ತರಣೆಯಂತಹ ವಿಷಯವನ್ನು ಹೈಕಮಾಂಡ್ ಜೊತೆ ಚರ್ಚಿಸುವ ಉದ್ದೇಶ ಇರಿಸಿಕೊಂಡಿಲ್ಲ, ಆದರೆ ಅಲ್ಲಿ ಏನು ಚರ್ಚೆಯಾಗುತ್ತದೆಯೋ ಗೊತ್ತಿಲ್ಲ ಎಂದರು.
ಇದನ್ನೂ ಓದಿ:ನಾಳೆಯಿಂದ ನ.13 ರವರೆಗೆ 13 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ