ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದ ನಂತರ ನಗರದಲ್ಲಿ ಪ್ಲೆಕ್ಸ್ ಬ್ಯಾನರ್‌ಗಳು ರಾರಾಜಿಸುತ್ತಿವೆ. ನಗರದ ಹಲವು ಕಡೆಗಳಲ್ಲಿ ಸಿಎಂ, ಸಚಿವರ, ಶಾಸಕರ ಸಾಧನೆಗಳನ್ನು ಬಿಂಬಿಸುವ ಹಾಗೂ ಹುಟ್ಟುಹಬ್ಬಗಳಿಗೆ ಶುಭಕೋರುವ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಸದ್ಯ ನಗರದ ಮುಖ್ಯ ವೃತ್ತಗಳಾದ ಕಾರ್ಪೊರೇಷನ್ ಸರ್ಕಲ್ ಕೆಆರ್ ವೃತ್ತ, ಟೌನ್ ಹಾಲ್ ಸರ್ಕಲ್, ವಿಧಾನಸೌಧ ಜಂಕ್ಷನ್, ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಕೋರುವ ಫ್ಲೆಕ್ಸ್, ಬ್ಯಾನರ್ಗಳನ್ನು ಅಳವಡಿಸಲಾಗಿದೆ.
ಬಿಬಿಎಂಪಿ ಕಾಯ್ದೆ 2020ರ ಅಡಿಯಲ್ಲಿ, ನಿರ್ದಿಷ್ಟವಾಗಿ 1981ರ ತೆರೆದ ಸ್ಥಳಗಳ ಕಾಯಿದೆಯ ಸೆಕ್ಷನ್ 3ರ ಅಡಿಯಲ್ಲಿ ಬಿಬಿಎಂಪಿ ಮಿತಿಗಳಲ್ಲಿ ಬ್ಯಾನರ್‌ಗಳು, ಬಂಟಿಂಗ್ಸ್, ಫ್ಲೆಕ್ಸ್‌ಗಳು ಮತ್ತು ಪೋಸ್ಟರ್‌ಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಹೈಕೋರ್ಟ್ ಕೂಡ ಸ್ಪಷ್ಟ ಅದೇಶ ಹೊರಡಿಸಿದೆ. ಹೈಕೋರ್ಟ್ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಹೇಳುತ್ತಾ ಬಂದಿದೆ. ಆದರೆ, ರಾಜಕಾರಣಿಗಳ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳು ಎಲ್ಲೆಡೆ ರಾರಾಜಿಸುತ್ತಿದ್ದರೂ ಈವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ರಮ ಫ್ಲೆಕ್ಸ್‌ಗಳ ವಿರುದ್ಧ ಬಿಬಿಎಂಪಿ 26 ಎಫ್‌ಐಆರ್‌ಗಳನ್ನು ದಾಖಲಿಸಿದೆ. ರಾಜಕಾರಣಿಗಳು ಬಿಬಿಎಂಪಿ ನಿಯಮಗಳು ಮತ್ತು ಹೈಕೋರ್ಟ್ ನಿರ್ದೇಶನ ಎರಡನ್ನೂ ನಿರ್ಲಕ್ಷಿಸುತ್ತಿದ್ದಾರೆ. ನಿಯಮ ಉಲ್ಲಂಘಿಸುವವರಿಗೆ ರೂ 1,000 ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ವಿಚಾರಗಳು ನನ್ನ ಗಮನಕ್ಕೆ ಬಂದಿದೆ ಅಧಿಕಾರಿಗಳಿಗೆ ಫ್ಲೆಕ್ಸ್‌ಗಳನ್ನು ತೆಗೆದುಹಾಕುವಂತೆ ಸೂಚಿಸಿದ್ದೇನೆ ಎಂದು ಬಿಬಿಎಂಪಿ ಕಂದಾಯ ಇಲಾಖೆಯ ವಿಶೇಷ ಆಯುಕ್ತ ಆರ್. ಎಲ್. ದೀಪಕ್ ಹೇಳಿದ್ದಾರೆ.