ಬೆಂಗಳೂರು:ಕೆ.ಆರ್.ಪುರದ ಅನರ್ಹ ಶಾಸಕ ಬೈರತಿ ಬಸವರಾಜ್ 5 ಲಕ್ಷ ಮೌಲ್ಯದ ಆಗತ್ಯ ವಸ್ತುಗಳನ್ನು ಸಂಗ್ರಹಿಸಿ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಸಂತ್ರಸ್ತರಿಗೆ ಕಳುಹಿಸಿದ್ದಾರೆ.
ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೆರವಿಗೆ ನಿಂತ ಬೈರತಿ ಬಸವರಾಜ್ ಉತ್ತರ ಕರ್ನಾಟಕದ ನೆರೆ ಪರಿಹಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅತಂತ್ರ ಸ್ಥಿತಿಯಲ್ಲಿರುವ ಜನರು ಬದುಕು ಕಟ್ಟಿಕೊಳ್ಳಲು ಮುಖ್ಯಮಂತ್ರಿ ಪರಿಹಾರ ನಿಧಿಗೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿಗಳನ್ನು ನೀಡಿದ್ದೇನೆ. ರಾಜ್ಯದಲ್ಲಿ ಎಂದೂ ಕಾಣದಂತಹ ಭೀಕರ ಪ್ರವಾಹ ಜನರ ಬದುಕನ್ನ ಕಸಿದುಕೊಂಡಿದೆ. ಅವರ ಬದುಕನ್ನ ಹಸನು ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಅಲ್ಲಿನ ಕುಟುಂಬಗಳು ಮನೆಮಠ ಕಳೆದುಕೊಂಡು ತೊಂದರೆಯಲ್ಲಿರುವುದರಿಂದ, ಕಳೆದ ಒಂದು ವಾರದಿಂದ ಸಂತ್ರಸ್ತರಿಗಾಗಿ ಆಹಾರ ಪದಾರ್ಥಗಳು ಅಕ್ಕಿ ,ಬೇಳೆ, ಎಣ್ಣೆ, ಸೇರಿದಂತೆ ಗೃಹಬಳಕೆ ವಸ್ತುಗಳು, ತಟ್ಟೆ ಲೋಟ, ಬಕೆಟ್, ಪಾತ್ರೆ, ಕೊಬ್ಬರಿ ಎಣ್ಣೆ, ಹಿರಿಯರಿಗೆ ಮತ್ತು ಮಕ್ಕಳಿಗೆ ಹೊಸ ಬಟ್ಟೆಗಳು, ನ್ಯಾಪ್ಕಿನ್ಸ್ ಹಾಗೂ ಹಣ್ಣು ತರಕಾರಿಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಲಾಗಿದೆ.
ಬಿ.ಎ.ಬಸವರಾಜ್ ಸೇನೆಯ ಸದಸ್ಯರುಗಳು ನೇರವಾಗಿ ಅಲ್ಲಿಗೆ ತೆರಳಿ, ಅವಶ್ಯಕತೆ ಇರುವ ಸಾರ್ವಜನಿಕರಿಗೆ ವಿತರಿಸಲು ಹೊರಟಿದ್ದಾರೆ. ಪ್ರಮುಖವಾಗಿ ಜಾನುವಾರುಗಳಿಗೆ ಮೇವಿನ ಅವಶ್ಯಕತೆಯಿದ್ದು, ನಮ್ಮ ಯುವಕರು ರಾಸುಗಳಿಗೆ ಮೇವನ್ನು ಸಹ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದರು.