ಬೆಂಗಳೂರು:ಕಾಂಗ್ರೆಸ್ ಸರ್ಕಾರದ ಕನಸಿನ ಶಕ್ತಿ ಯೋಜನೆ ಶತಕೋಟಿ ಸಂಭ್ರಮವನ್ನು ಆಚರಿಸುತ್ತಿದೆ. ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ನೂರು ಕೋಟಿ ಮಹಿಳೆಯರು ಉಚಿತವಾಗಿ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಮಹಿಳೆಯರಿಗಾಗಿ ಜಾರಿಯಾದ ಉಚಿತ ಬಸ್ ಪ್ರಯಾಣಿಸುವ ಶಕ್ತಿ ಯೋಜನೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಕಾಂಗ್ರೆಸ್ ಸರ್ಕಾರ ಜೂನ್ 11ರಿಂದ ತನ್ನ ಪಂಚ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಮೊದಲು ಅನುಷ್ಠಾನಗೊಳಿಸಿತು. ಈ ಯೋಜನೆ ಅಡಿ ಸಾಮಾನ್ಯ ಸಾರಿಗೆ ಬಸ್ಗಳಲ್ಲಿ ರಾಜ್ಯದ ಮಹಿಳಾ ಪ್ರಯಾಣಿಕರಿಗೆ ಉಚಿತ ಸೇವೆಯನ್ನು ನೀಡಲಾಗುತ್ತಿದೆ. ಯೋಜನೆ ಜಾರಿಯಾದಾಗಿನಿಂದ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ.
ಪ್ರಮುಖವಾಗಿ ಪುಣ್ಯ ಕ್ಷೇತ್ರಗಳತ್ತ ಮಹಿಳೆಯರು ತೆರಳಿ ಉಚಿತ ಪ್ರಯಾಣದ ಅನುಕೂಲ ಪಡೆಯುತ್ತಿದ್ದಾರೆ. ಶನಿವಾರ ಬಹುತೇಕ ಎಲ್ಲಾ ಸರ್ಕಾರಿ ಬಸ್ಗಳು ಅದರಲ್ಲೂ ಧರ್ಮಸ್ಥಳ, ಚಾಂಮುಂಡೇಶ್ವರಿ ದೇವಾಲಯ ಸೇರಿ ರಾಜ್ಯದ ಪ್ರಸಿದ್ಧ ದೇವಾಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಭೇಟಿ ನೀಡುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಯಾಗಿ ಐದೂವರೆ ತಿಂಗಳಾಗಿದ್ದು, ಉಚಿತ ಮಹಿಳಾ ಪ್ರಯಾಣಿಕರ ಸಂಖ್ಯೆ ನೂರು ಕೋಟಿಯ ಗಡಿ ದಾಟಿದೆ. ಈವರೆಗೆ ಒಟ್ಟು 100.47 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಬೆಳೆಸಿದ್ದಾರೆ.
ಶಕ್ತಿ ಯೋಜನೆ ನಂತರ ಮಹಿಳೆಯರ ಪ್ರಯಾಣ ಹೆಚ್ಚಳ:ಶಕ್ತಿ ಯೋಜನೆ ಜಾರಿಯಾದ ಬಳಿಕ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಸಾಮಾನ್ಯ ಬಸ್ಗಳಲ್ಲಿ ಪುರುಷರಿಗಿಂತ ಮಹಿಳಾ ಪ್ರಯಾಣಿಕರದ್ದೇ ಸಂಖ್ಯೆ ಹೆಚ್ಚಾಗಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಈವರೆಗೆ ಬಸ್ಗಳಲ್ಲಿ ಒಟ್ಟು 178.67 ಕೋಟಿ ಜನರು ಪ್ರಯಾಣಿಸಿದ್ದಾರೆ. ಈ ಪೈಕಿ ಮಹಿಳಾ ಪ್ರಯಾಣಿಕರ ಸಂಖ್ಯೆ 100.47 ಕೋಟಿ ತಲುಪಿದೆ. ಅಂದರೆ ಒಟ್ಟು ಪ್ರಯಾಣಿಕರ ಪೈಕಿ ಮಹಿಳಾ ಪ್ರಯಾಣಿಕರ ಪ್ರಮಾಣ 56.23% ರಷ್ಟಿದೆ. ಈವರೆಗೆ ಮಹಿಳಾ ಪ್ರಯಾಣಿಕರ ಪ್ರಯಾಣದ ಶೂನ್ಯ ಟಿಕೆಟ್ ಮೌಲ್ಯ 2,397.80 ಕೋಟಿ ರೂ.ಗಳಾಗಿವೆ. ಶಕ್ತಿ ಯೋಜನೆಯ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಪ್ರತಿದಿನ ಸುಮಾರು 67 ಲಕ್ಷ ಕಿಮೀ ಹೆಚ್ಚಳ ಮಾಡಿ ಕಾರ್ಯಾಚರಿಸುತ್ತಿದೆ.