ಬೆಂಗಳೂರು: ಮಹಾನಗರದಲ್ಲಿ ಬಡ ರೋಗಿಗಳು ಡಯಾಲಿಸಿಸ್ಗಾಗಿ ಅಲೆದಾಡುತ್ತಿರುವುದನ್ನು ಕಡಿಮೆ ಮಾಡಲು ಬೃಹತ್ ಡಯಾಲಿಸಿಸ್ ಕೇಂದ್ರ ಆರಂಭಿಸಲು ಸಿದ್ದತೆ ನಡೆದಿದೆ. ಜಯನಗರದ ಕೆಎಸ್ಆರ್ಟಿಸಿ ಆಸ್ಪತ್ರೆಯಲ್ಲಿ ಖಾಸಗಿ ಚಾರಿಟಿ ಮೂಲಕ ಡಯಾಲಿಸಿಸ್ ಕೇಂದ್ರ ತೆರೆದು ಸಂಪೂರ್ಣ ಉಚಿತವಾಗಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸುವ ಚಿಂತನೆ ನಡೆದಿದ್ದು, ಬಿಲ್ಲಿಂಗ್ ಕೌಂಟರ್ ಲೆಸ್ ವ್ಯವಸ್ಥೆ ಪರಿಕಲ್ಪನೆ ಹುಟ್ಟುಹಾಕಲು ಸಂಸದ ತೇಜಸ್ವಿ ಸೂರ್ಯ ಮುಂದಾಗಿದ್ದಾರೆ.
ಹೌದು, ಸದ್ಯದಲ್ಲೇ ಜಯನಗರದ ಕೆಎಸ್ಆರ್ಟಿಸಿ ಆಸ್ಪತ್ರೆಯಲ್ಲಿ ರಾಜ್ಯದ ಬೃಹತ್ ಡಯಾಲಿಸಿಸ್ ಘಟಕ ಆರಂಭಗೊಳ್ಳಲಿದೆ. ನಿತ್ಯ 50 ಜನರಿಗೆ ಡಯಾಲಿಸಿಸ್ ಮಾಡಬಹುದಾಗಿದ್ದು, ತಿಂಗಳಿಗೆ 1500 ಡಯಾಲಿಸಿಸ್ ಮಾಡುವ ದೊಡ್ಡ ಘಟಕ ಆರಂಭಿಸಲಾಗುತ್ತದೆ. ಖಾಸಗಿ ಚಾರಿಟಿ ಮೂಲಕ ನಡೆಯಲಿರುವ ಈ ಡಯಾಲಿಸಿಸ್ ಕೇಂದ್ರಕ್ಕೆ ಸಂಸದರ ನಿಧಿಯಿಂದ ಅಗತ್ಯ ಸಹಕಾರ, ನೆರವು ಕಲ್ಪಿಸಲಾಗುತ್ತಿದೆ. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿನ ದರಕ್ಕೂ ಕಡಿಮೆ ದರವನ್ನು ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ.
ಸದ್ಯ ಮಹಾನಗರಿ ಬೆಂಗಳೂರಿನಲ್ಲಿ ಅತಿ ಕಡಿಮೆ ಡಯಾಲಿಸಿಸ್ ಶುಲ್ಕವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಡೆಯಲಾಗುತ್ತಿದೆ. ಪ್ರತಿ ಡಯಾಲಿಸಿಸ್ ಗೆ 850 ರೂ. ನಿಗದಿಪಡಿಸಲಾಗಿದೆ. ಆದರೆ, ಅದಕ್ಕೂ ಕಡಿಮೆ ದರಕ್ಕೆ ಜಯನಗರ ಕೆಎಸ್ಆರ್ ಟಿಸಿ ಆಸ್ಪತ್ರೆಯಲ್ಲಿ ನಿಗದಿಪಡಿಸಲು ನಿರ್ಧರಿಸಿದ್ದು, ಪ್ರತಿ ಡಯಾಲಿಸಿಸ್ಗೆ 750 ರೂ. ಹಣ ನಿಗದಿಪಡಿಸಲು ಚಿಂತನೆ ನಡೆಸಲಾಗಿದೆ.
ಈ ಹಣವನ್ನೂ ಕೂಡ ರೋಗಿಗಳಿಂದ ಪಡೆಯುವ ಬದಲು ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳ ಸಿಎಸ್ಆರ್ ಫಂಡ್ ಮೂಲಕ ಭರಿಸುವ ಚಿಂತನೆ ನಡೆಸಿದ್ದು, ವಿಪ್ರೋ, ಇನ್ ಫೋಸಿಸ್, ಟಿಸಿಎಸ್ ನಂತಹ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ವಾರ್ಷಿಕ ಡಯಾಲಿಸಿಸ್ ಕೇಂದ್ರ ನಿರ್ವಹಣಗೆ ಬೇಕಾದ ಹಣವನ್ನು ಸಿಎಸ್ಆರ್ ನಿಧಿಯಿಂದ ಒದಗಿಸಿಕೊಂಡು ರೋಗಿಗಳಿಗೆ ಉಚಿತ ಸೇವೆ ನೀಡಬೇಕು ಎನ್ನುವ ಉದ್ದೇಶವನ್ನು ಹೊಂದಲಾಗಿದೆ.
ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಡಯಾಲಿಸಿಸ್ ಮಾಡಿಸಿಕೊಳ್ಳಲು ಜನರು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಬಡವರಿಗೇ ಈ ಖಾಯಿಲೆ ಬರುತ್ತದೆಯಲ್ಲಾ ಎನ್ನುವ ನೋವು ಕಾಡುತ್ತಿದೆ. ಹಾಗಾಗಿ ಬಡ ರೋಗಿಗಳ ಅನುಕೂಲಕ್ಕಾಗಿಯೇ ಜಯನಗರದಲ್ಲಿ ಬೃಹತ್ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗುತ್ತಿದೆ.
ಬಿಲ್ಲಿಂಗ್ ಕೌಂಟರ್ ಇಲ್ಲದೇ ಡಯಾಲಿಸಿಸ್ ಕೇಂದ್ರ ಆರಂಭಿಸಲು ಚಿಂತನೆ ಮಾಡಿದ್ದೇವೆ. ಬಡ ರೋಗಿಗಳ ನೋಂದಣಿ ಮಾಡಿಕೊಂಡು ಡಯಾಲಿಸಿಸ್ ಮಾಡಿ ಕಳಿಸಬೇಕು. ಅವರ ಯಾವುದೇ ರೀತಿಯ ಶುಲ್ಕವನ್ನು ಇಲ್ಲಿ ಕಟ್ಟುವಂತೆ ಇರಬಾರದು. ಅದಕ್ಕಾಗಿಯೇ ಇಲ್ಲಿ ಬಿಲ್ಲಿಂಗ್ ಕೌಂಟರ್ ಇಲ್ಲದ ರೀತಿ ವ್ಯವಸ್ಥೆ ಮಾಡಲು ಸಾಕಷ್ಟು ಪ್ರಯತ್ನ ನಡೆಸಲಾಗುತ್ತಿದೆ ಎಂದರು.