ಬೆಂಗಳೂರು : ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಅವರು ವಿಧಾನ ಪರಿಷತ್ನಲ್ಲಿ ಆರು ವಿಶ್ವವಿದ್ಯಾಲಯಗಳ ವಿಧೇಯಕ ಮಂಡಿಸಿದರು. ವಿಧೇಯಕದ ವಿವರ ನೀಡಿದ ಸಚಿವರು, ವಿಧಾನಸಭೆಯಲ್ಲಿ ಬಿಲ್ ಮಂಡನೆ ಆಗಿ ಅನುಮೋದನೆ ಪಡೆದಿದೆ. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಬೇಕು. ಕೌಶಲ್ಯ ಹೆಚ್ಚಾಗಬೇಕು. ಭಾರತ ಸಹ ಸೇವಾಕ್ಷೇತ್ರದಲ್ಲಿ ವಿಶ್ವದಲ್ಲೇ ನಾವು ಮುಂದಿದ್ದೇವೆ ಎಂದರು.
ಕಲಿಕೆ-ಕೌಶಲ್ಯ ಒಟ್ಟಾಗಿ ಬೆಳೆಯುತ್ತಿದೆ. ವಿಶ್ವಮಟ್ಟದಲ್ಲಿ ನಾವು ಸಾಕಷ್ಟು ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದೇವೆ. ಇದರಲ್ಲಿ ಇನ್ನಷ್ಟು ಸಾಧನೆ ಮಾಡಬೇಕಿದೆ. ಹಾಗಾಗಿ ಖಾಸಗಿ ವಿಶ್ವವಿದ್ಯಾಲಯದ ಅವಶ್ಯಕತೆ ಹೆಚ್ಚಾಗಿದೆ. ರಾಜ್ಯದ ಎಲ್ಲಾ ಕ್ಷೇತ್ರದಲ್ಲೂ ನಾವು ದೊಡ್ಡ ಮಟ್ಟದಲ್ಲಿ ಬೆಳೆಯಲು ಖಾಸಗಿ ವಿವಿ ಕೊಡುಗೆ ಅಪಾರ. ವಿಶ್ವ ಮಟ್ಟದಲ್ಲಿ 24ನೇ ಸ್ಥಾನದಲ್ಲಿ ನಾವಿದ್ದೇವೆ. ಇನ್ನಷ್ಟು ಉತ್ತಮ ಸ್ಥಾನಕ್ಕೆ ಏರಬೇಕಿದೆ. ನಾಯಕತ್ವ ಗುಣ ಬೆಳೆಸುವ ವ್ಯಕ್ತಿತ್ವ ರೂಪಿಸುತ್ತಿದ್ದೇವೆ. ಬದಲಾಗುತ್ತಿರುವ ಜಗತ್ತಿನಲ್ಲಿ ನಾವು ನಮ್ಮ ಗುಣಮಟ್ಟ ಹೆಚ್ಚಿಸಿಕೊಳ್ಳಬೇಕಿದೆ. ಉನ್ನತ ಶಿಕ್ಷಣದಲ್ಲಿ ಇನ್ನಷ್ಟು ಪ್ರಗತಿ ಆಗಬೇಕು. ನಮ್ಮ ವ್ಯವಸ್ಥೆ ಮುಂದುವರಿದ ರಾಷ್ಟ್ರಕ್ಕೆ ಪೂರಕವಾಗಿರಬೇಕು. ಇದಕ್ಕಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಗತಿಗಾಗಿ ಈ ತಿದ್ದುಪಡಿ ತರುತ್ತಿದ್ದೇವೆ. ಹೊಸ ಸುಧಾರಣೆಗೆ ನಾವು ನಾಂದಿ ಹಾಡುತ್ತಿದ್ದೇವೆ ಎಂದರು.
2020-22ನೇ ಸಾಲಿನ ಕಿಷ್ಕಿಂದ ಖಾಸಗಿ ವಿಶ್ವವಿದ್ಯಾಲಯ, ಆಚಾರ್ಯ ಖಾಸಗಿ ವಿಶ್ವವಿದ್ಯಾಲಯ, ಸಪ್ತಗಿರಿ ಖಾಸಗಿ ವಿಶ್ವವಿದ್ಯಾಲಯ, ರಾಜ್ಯ ಒಕ್ಕಲಿಗರ ಸಂಘದ ಖಾಸಗಿ ವಿಶ್ವವಿದ್ಯಾಲಯ, ಜಿ.ಎಂ ಖಾಸಗಿ ವಿಶ್ವವಿದ್ಯಾಲಯ, ಟಿ.ಜಾನ್ ವಿಶ್ವವಿದ್ಯಾಲಯ ವಿಧೇಯಕ ಮಂಡಿಸಿ ವಿವರ ನೀಡಿ ಸೀಟು ಹಂಚಿಕೆ 20% ರಿಂದ 40% ಆಗಲಿದೆ. ಶುಲ್ಕ ನಿಗದಿ, ಉತ್ತಮ ಶಿಕ್ಷಣಕ್ಕೆ ಒತ್ತು, ಆರ್ಥಿಕ ವಹಿವಾಟು, ವ್ಯವಸ್ಥಿತ ಲೆಕ್ಕ ಪತ್ರ ನಿರ್ವಹಣೆ, ಎಲ್ಲಾ ವಿಧದ ಮಾಹಿತಿ ವೆಬ್ಸೈಟ್ನಲ್ಲಿ ಬರಬೇಕು. ಶಿಸ್ತು ಇಲ್ಲದಿದ್ದರೆ ಕ್ರಮ ಆಗಲಿದೆ. ಯಾವುದೇ ಬೆಳವಣಿಗೆ ಸಂದರ್ಭ ಸರ್ಕಾರ ಮಧ್ಯಪ್ರವೇಶಿಸಬಹುದು. ಸರ್ಕಾರ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ವಿಧೇಯಕ ತರುತ್ತಿದ್ದೇವೆ ಎಂದರು.
ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಇದೊಂದು ಪ್ರಮುಖ ವಿಚಾರ. ಹೀಗಾಗಿ ಈ ಬಗ್ಗೆ ಮಾಹಿತಿ ಪಡೆದು ಚರ್ಚಿಸಬೇಕು. ಇದರಿಂದ ನಾಳೆ ಬೆಳಗ್ಗೆ ಚರ್ಚೆಗೆ ಪಡೆಯಿರಿ. ಇದು ಗಂಭೀರ ಹಾಗೂ ಪ್ರಮುಖ ವಿಚಾರ. ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಆಗಿದೆ. ಇದರಿಂದ ನಾಳೆ ಚರ್ಚೆ ಮಾಡೋಣ ಅಂದರು. ಸಭಾನಾಯಕರು ಮಾತನಾಡಿ, ಉಳಿದ ಸದಸ್ಯರು ಮಾತನಾಡಲಿ, ಸಮಯ ಸಿಗಲಿದೆ. ಹೀಗಾಗಿ ಒಂದಿಷ್ಟು ಸದಸ್ಯರ ಮಾತು ಮುಗಿಸಿ, ನಂತರ ಉತ್ತರಿಸಲಿ ಎಂದರು.
ಮರಿತಿಬ್ಬೇಗೌಡರು ಸಹ ಪ್ರತಿಪಕ್ಷ ನಾಯಕರ ಬೆಂಬಲಕ್ಕೆ ನಿಂತರು. ಸಭಾಪತಿಗಳು ಮುಂದೂಡಲು ಹಿಂದೇಟು ಹಾಕಿ, ಚರ್ಚಿಸಿ, ಗೊತ್ತಿರುವ ವಿಚಾರವೇ ಆಗಿದೆ. ಇಂದೇ ಮಾತನಾಡಿ ಎಂದು ಒತ್ತಾಯಿಸಿದರು. ಪ್ರತಿಪಕ್ಷ ನಾಯಕರು ಇದೇ ಸ್ಥಿತಿ ಮುಂದುವರಿದರೆ ನಾವು ಸಭಾತ್ಯಾಗ ಮಾಡಬೇಕಾಗುತ್ತದೆ. ನಾವು ನಿಯಮ 72 ಹಾಗೂ 330 ರ ಮೇಲೆ ಚರ್ಚೆ ಎಂದಿದ್ದಿರಿ. ಆದರೆ ಏಕಾಏಕಿ ಬಿಲ್ ಪಡೆದಿದ್ದೀರಿ. ನಾವು ಅಧ್ಯಯನ ಮಾಡಬೇಕು. 5.30 ರವರೆಗೆ ಅವಕಾಶ ನೀಡಿ ಎಂದರು.