ಬೆಂಗಳೂರು:ಇತಿಹಾಸ ಪ್ರಸಿದ್ಧ ಬೆಂಗಳೂರು ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಇಂದು ಕರಗ ಆಚರಣೆಯ ಸಂದರ್ಭದಲ್ಲಿ ಭಕ್ತರು ಭಾರಿ ಪ್ರಮಾಣದ ಕರ್ಪೂರಕ್ಕೆ ಬೆಂಕಿ ಹಚ್ಚಿದ್ದು, ಹಲವು ವಾಹನಗಳು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿವೆ. ಕರಗೋತ್ಸವ ಪ್ರಯುಕ್ತ ಇಂದು ಪೂಜಾ ವಿಧಿವಿಧಾನ ಆರಂಭಗೊಳ್ಳುತ್ತಿದ್ದಂತೆ ಎನ್.ಆರ್.ಸಿಗ್ನಲ್ನಿಂದ ಧರ್ಮರಾಯ ದೇವಸ್ಥಾನದವರೆಗೆ ಸುಮಾರು 700 ಮೀಟರ್ ದೂರ ಭಕ್ತರು ಕರ್ಪೂರ ಹಚ್ಚಿ ಸೇವೆ ಸಲ್ಲಿಸುತ್ತಿದ್ದರು. ಭಾರಿ ಪ್ರಮಾಣದಲ್ಲಿ ಕರ್ಪೂರ ಹಚ್ಚಿದ ಕಾರಣ ಬೆಂಕಿ ಆವರಿಸಿಕೊಂಡಿತು. ನೋಡು ನೋಡುತ್ತಿದ್ದಂತೆ ಬೆಂಕಿ ರಸ್ತೆ ಪಕ್ಕ ನಿಲ್ಲಿಸಿದ್ದ 20ಕ್ಕೂ ಹೆಚ್ಚು ಬೈಕ್ ಹಾಗೂ ಆಟೋಗಳಿಗೆ ತಗುಲಿದೆ. ಕ್ಷಣಾರ್ಧದಲ್ಲಿ ವಾಹನಗಳು ಸುಟ್ಟು ಹೋಗಿವೆ.
ದೇವಸ್ಥಾನ ಆಡಳಿತ ಮಂಡಳಿ ಕರ್ಪೂರ ಹಚ್ಚಬೇಡಿ ಎಂದು ವಿನಂತಿಸಿದ್ದರೂ ಭಕ್ತರು ದೊಡ್ಡ ಪ್ರಮಾಣದಲ್ಲಿ ಕರ್ಪೂರ ಬೆಳಗಿದ್ದರಿಂದ ಅನಾಹುತ ಸಂಭವಿಸಿದೆ. ಜನರು ಬೆಂಕಿ ನಂದಿಸಲು ಪ್ರಯತ್ನಿಸಲು ಪ್ರಯತ್ನಿಸಿದರೂ ತಹಬದಿಗೆ ಬಾರದೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ತುರ್ತು ಸೇವಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅಗ್ನಿಯನ್ನು ಸಂಪೂರ್ಣವಾಗಿ ನಂದಿಸಿದರು.
ಇದನ್ನೂ ಓದಿ:ಆನೇಕಲ್ ಕರಗಕ್ಕೆ ನೀತಿ ಸಂಹಿತೆ ಅಡ್ಡಿ: ಕರಗ ರಹಿತ ಪೂಜಾ ವಿಧಿ ವಿಧಾನಗಳಿಗೆ ಅವಕಾಶ
ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಿನ ರಾತ್ರಿಯಲ್ಲಿ ಸಂಭ್ರಮದ ಕರಗೋತ್ಸವ ನಡೆಯುತ್ತದೆ. ಇಂದು ಮಧ್ಯರಾತ್ರಿ 12.30ಕ್ಕೆ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಹೂವಿನ ಕರಗಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಈ ಬಾರಿಯೂ ಕರಗವನ್ನು ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಹೊರಲಿದ್ದಾರೆ.