ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಕೆಲ ದಿನಗಳಿಂದ ಕಡಿಮೆಯಾಗಿದ್ದ ಯುವಕರ ಪುಂಡಾಟ, ಈಗ ಮತ್ತೆ ಶುರುವಾಗಿದೆ.
ಪ್ರಾಣ ಹಾನಿಯಾದರೂ ಬುದ್ಧಿ ಕಲಿಯದ ಯುವಕರು: ದೇವನಹಳ್ಳಿ ಏರ್ಪೋರ್ಟ್ ರಸ್ತೆಯಲ್ಲಿ ಮತ್ತೆ ವ್ಹೀಲಿಂಗ್..! - ದೇವನಹಳ್ಳಿ ಏರ್ಪೋರ್ಟ್ ರಸ್ತೆ
ಕಳೆದ ಒಂದು ತಿಂಗಳ ಹಿಂದೆ ಕೆಐಎಎಲ್ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ವೇಳೆ ಅಪಘಾತ ನಡೆದು ಯುವಕರಿಬ್ಬರು ಪ್ರಾಣ ಕಳೆದುಕೊಂಡಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಯುವಕರು ಮತ್ತೆ ವ್ಹೀಲಿಂಗ್ ಕ್ರೇಝ್ ಶುರು ಮಾಡಿಕೊಂಡಿದ್ದಾರೆ.
ಬೆಳಗಿನ ಹೊತ್ತು ಹೆದ್ದಾರಿ ಖಾಲಿ ಇರುವುದರಿಂದ ರಸ್ತೆಗಿಳಿಯುವ ಯುವಕರು, ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ವ್ಹೀಲಿಂಗ್ ಮಾಡುತ್ತಾರೆ. ಹತ್ತು ಬೈಕ್ಗಳಲ್ಲಿ ಒಂದು ತಂಡವಾಗಿ ಹೆದ್ದಾರಿಗೆ ಇಳಿಯುವ ಬೈಕ್ ಸವಾರರು, ಒಂದೊಂದು ಬೈಕ್ನಲ್ಲಿ ಮೂವರು ಕುಳಿತುಕೊಂಡು ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುವುದು ಸರ್ವೆ ಸಾಮಾನ್ಯವಾಗಿದೆ.
ಯುವಕರ ಪುಂಡಾಟಿಕೆಯಿಂದ ಇತರೆ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಾದ ಸ್ಥಿತಿ ಇದೆ. ಕಳೆದ ಒಂದು ತಿಂಗಳ ಹಿಂದೆ ವಿಮಾನ ನಿಲ್ದಾಣ ರಸ್ತೆಯ ಜಕ್ಕೂರು ಬಳಿ ವ್ಹೀಲಿಂಗ್ ಮಾಡುತ್ತಿದ್ದ ವೇಳೆ ಯುವಕರಿಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಇಷ್ಟಾದರೂ, ಯುವಕರ ಪುಂಡಾಟಿಕೆ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ, ಪೊಲೀಸರು ಇದಕ್ಕೆ ಬ್ರೇಕ್ ಹಾಕಬೇಕಿದೆ.