ಬೆಂಗಳೂರು: ಆನ್‌ಲೈನ್‌ನಲ್ಲಿ ಬಾಡಿಗೆಗೆ ಪಡೆದು ಬೈಕ್ ಮಾರಿ ಅದೇ ಹಣದಲ್ಲಿ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಬೈಕ್ ಕಳ್ಳರನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 19 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ ಪೊಲೀಸರು.
ಜೀವನದಲ್ಲಿ ಹಣ ಇರದಿದ್ರೂ ಮಜಾ ಮಾಡ್ಬೇಕೆಂದುಕೊಂಡರು.. ಆಸೆ ತೀರಿಸಿಕೊಳ್ಳಲು ಕಳ್ಳ ಮಾರ್ಗ ಹಿಡಿದವರ ಕೈಗೆ ಕೋಳ! - undefined
ಆನ್‌ಲೈನ್‌ನಲ್ಲಿ ಬಾಡಿಗೆಗೆ ಪಡೆದ ಬೈಕ್‌ನ ಮಾರಿ ಅದೇ ಹಣದಲ್ಲಿ ಪಬ್‌ನಲ್ಲಿ ಪಾರ್ಟಿ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನ ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ವಿಶೇಷ ಅಂದ್ರೇ ಆರೋಪಿಗಳಿಂದ 19 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಡಿವಾಳದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕೇರಳ ಮೂಲದ ಸಿಮ್‌ಜಿತ್ ಶಶಿಕುಮಾರ್ (22), ಜೋಸಿನ್ ಟಿಟೋಸ್ (20) ಬಂಧಿತ ಆರೋಪಿಗಳು. ಕೇರಳದಿಂದ ಕೆಲಸಕ್ಕೆಂದು ಬಂದು ಬಳಿಕ ಐಷಾರಾಮಿ ಜೀವನ ನಡೆಸಬೇಕು. ಪಬ್‌ನಲ್ಲಿ ಪಾರ್ಟಿ ಮಾಡಿ ಮಜಾ ಮಾಡಬೇಕೆಂದು ಆರೋಪಿಗಳಿಬ್ಬರೂ ಬೈಕ್ ಕಳ್ಳತನ ಮಾಡಲು ಸಂಚು ರೂಪಿಸಿ, ಬಾಣಸವಾಡಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಆನ್‌ಲೈನ್ ಮೂಲಕ ಬೈಕ್ ಬಾಡಿಗೆ ಪಡೆದು ನಗರದಲ್ಲಿ ಸುತ್ತಾಡುತಿದ್ದರು. ಕಣ್ಣಿಗೆ ಕಾಣುವ ದುಬಾರಿ ಬೈಕ್ ಎಗರಿಸುತ್ತಿದ್ದರು. ಆನ್‌ಲೈನ್‌ನಲ್ಲಿ ಬಾಡಿಗೆ ಪಡೆದ ಬೈಕ್‌ನ ಅಲ್ಲಿಯೇ ಬಿಟ್ಟು ಪರಾರಿಯಾಗುತ್ತಿದ್ದರು. ಬೈಕ್ ಕದ್ದ ದಿನವೇ ಮಧ್ಯವರ್ತಿಯ ಸಹಾಯದಿಂದ ಲಕ್ಷಾಂತರ ರೂಪಾಯಿ ಬೈಕ್‌ನ ಕೇವಲ 10-20 ಸಾವಿರ ರೂ.ಗಳಿಗೆ ಮಾರಾಟ ಮಾಡುತಿದ್ದರು. ನಂತರ ಬಂದ ಹಣದಲ್ಲಿ ಪಬ್‌ಗೆ ಹೋಗಿ ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದರು.
ಈ ಕುರಿತು ಹಲವು ದೂರುಗಳು ಮಡಿವಾಳ ಠಾಣೆಯಲ್ಲಿ ದಾಖಲಾಗಿದ್ದವು. ಆ ಹಿನ್ನೆಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳರಿಬ್ಬರನ್ನೂ ಬಂಧಿಸಿ ಜೈಲಿಗಟ್ಟಿದ್ದಾರೆ. ಇವರ ಬಂಧನದಿಂದ ಹೆಚ್‌ಎಸ್‌ಆರ್ ಲೇಔಟ್, ಬಾಣಸವಾಡಿ, ಮಡಿವಾಳ, ಹಲಸೂರು ಸುತ್ತಲಿನ ಪ್ರದೇಶಗಳಲ್ಲಿ ಬೈಕ್ ಕಳ್ಳತನ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.