ಕರ್ನಾಟಕ

karnataka

ETV Bharat / state

ಬೆಂಗಳೂರಿನ ಪ್ರತಿ ವಾರ್ಡ್​ಗೂ ಬೈಕ್ ಆಂಬುಲೆನ್ಸ್ ಅಂದರು ಅಂದು; ಮಾತು ತಪ್ಪಿದರು ಇಂದು! - Bike ambulance project

2015 ರಲ್ಲಿ ಕಾಂಗ್ರೆಸ್ ಸರ್ಕಾರ ಬೈಕ್ ಆಂಬುಲೆನ್ಸ್ ಸೇವೆ ಶುರು ಮಾಡಿತು. ಈ ಸೇವೆಯಿಂದ ಸಾರ್ವಜನಿಕರಿಗೆ ಅನುಕೂಲವಾದ ನಿಟ್ಟಿನಲ್ಲಿ, ಕಳೆದ 2019-20 ರ ಬಜೆಟ್​ನಲ್ಲಿ ಪ್ರತಿ ವಾರ್ಡ್​ಗೂ ಒಂದು ಬೈಕ್ ಆಂಬುಲೆನ್ಸ್ ಸೇವೆ ನೀಡುವುದಾಗಿ ಘೋಷಣೆ ಮಾಡಿದರು. ಇದಕ್ಕಾಗಿ ₹ 2 ಕೋಟಿ ಮೀಸಲಿಟ್ಟರೂ ಬಳಕೆಯಾಗದಿರುವುದು ವಿಪರ್ಯಾಸ.

ಮೇಯರ್ ಗಂಗಾಂಬಿಕೆ

By

Published : Sep 15, 2019, 4:41 PM IST

ಬೆಂಗಳೂರು: ವಾಹನ ದಟ್ಟಣೆಯ ಪರಿಣಾಮ ಶೀಘ್ರವಾಗಿ ಆಸ್ಪತ್ರೆ ತಲುಪಿ ಅಪಘಾತಕ್ಕೀಡಾದವರ ಪ್ರಾಣ ಉಳಿಸಲೆಂದೇ ಏಪ್ರಿಲ್ 2015 ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಬೈಕ್ ಆಂಬುಲೆನ್ಸ್ ಸೇವೆ ಆರಂಭಿಸಿತ್ತು. ಈ ಸೇವೆಯಿಂದ ಸಾರ್ವಜನಿಕರಿಗೆ ಅನುಕೂಲವಾದ ನಿಟ್ಟಿನಲ್ಲಿ, ಕಳೆದ 2019-20 ರ ಬಿಬಿಎಂಪಿ ಬಜೆಟ್​ನಲ್ಲಿ ಪ್ರತಿ ವಾರ್ಡ್​ಗೂ ಒಂದು ಬೈಕ್ ಆಂಬುಲೆನ್ಸ್ ಸೇವೆ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಇದಕ್ಕಾಗಿ ₹ 2 ಕೋಟಿ ತೆಗೆದಿರಿಸಲಾಗಿದೆ. ಆದರೆ ಈಗ ಇಂಥದ್ದೊಂದು ಯೋಜನೆ ಇದೆ ಅನ್ನೋದನ್ನು ಪಾಲಿಕೆ ಮತ್ತು ಪಾಲಿಕೆಯ ಆರೋಗ್ಯ ಇಲಾಖೆ ಮರೆತೇ ಬಿಟ್ಟಿದೆ!

ಬೆಂಗಳೂರಿನ ಪ್ರತಿ ವಾರ್ಡ್​ಗೂ ಬೈಕ್ ಆಂಬುಲೆನ್ಸ್ ಅಂದರು ಅಂದು; ಮಾತು ತಪ್ಪಿದರು ಇಂದು!!

ಈ ಕುರಿತು ಮೇಯರ್ ಗಂಗಾಂಬಿಕೆ ಅವರನ್ನು ಪ್ರಶ್ನಿಸಿದರೆ, 2019-20ರ ಬಜೆಟ್​ನಲ್ಲಿ ₹ 2 ಕೋಟಿ ಮೀಸಲಿಡಲಾಗಿದೆ. ಫೆಬ್ರವರಿಯಲ್ಲಿ ಬಜೆಟ್ ಮಂಡನೆ ನಂತರ ಅನುಮೋದನೆಗೆ ಮುಂದಾದಾಗ ಲೋಕಸಭೆ ಎಲೆಕ್ಷನ್‌ನಿಂದಾಗಿ ಜೂನ್​ನಲ್ಲಿ ನಮಗೆ ಅನುಮೋದನೆ ಸಿಕ್ಕಿತ್ತು. ಆದರೆ ಇದರ ನಡುವೆ ಹಳೆ ಸರ್ಕಾರ ಹೋಗಿ ಹೊಸ ಸರ್ಕಾರ ರಚನೆಯಾಯಿತು. ಹೊಸ ಸರ್ಕಾರ ಬಂದ್ಮೇಲೆ ಕ್ಯಾಬಿನೆಟ್​ನಲ್ಲಿ ಅನುಮೋದನೆ ಮಾಡಿಲ್ಲ ಅನ್ನೋ ಕಾರಣ ತಡೆಹಿಡಿಯಲಾಯಿತು.ಈಗ ಬೈಕ್ ಆಂಬುಲೆನ್ಸ್​ಗೆ ಹಣ ಬಿಡುಗಡೆ ಮಾಡಲಾಗಿದ್ದು, ಆದಷ್ಟು ಬೇಗ ಆಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಇತ್ತ ಪಾಲಿಕೆಯೇ ಹೆಚ್ಚುವರಿ ಬೈಕ್ ಆಂಬುಲೆನ್ಸ್ ಸೇವೆ ನೀಡೋದಾಗಿ ಹೇಳಿದ್ದರಿಂದ, ಇತ್ತ ಜಿವಿಕೆ ಕಂಪನಿ ರೂಪುರೇಷೆ ಸಿದ್ದ ಪಡಿಸಿಕೊಟ್ಟಿತ್ತು. ಈಗಾಗಲೇ ನಗರದಲ್ಲಿ 19 ಬೈಕ್ ಆಂಬುಲೆನ್ಸ್ ಇದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಈಗ ಪ್ರತಿ ವಾರ್ಡ್​ಗೂ ಬೈಕ್ ಆಂಬುಲೆನ್ಸ್ ಸೇವೆ ಆರಂಭವಾದರೆ ರಸ್ತೆ ಅಪಘಾತದಿಂದ ಅಥವಾ ಯಾವುದೇ ಇತರೆ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪುದನ್ನು ತಪ್ಪಿಸಬಹುದಾಗಿದೆ.

ಯಾವ ಯೋಜನೆ ಕಾಮಗಾರಿ ಬಗ್ಗೆ ಕೇಳಿದರೂ ಹಣವಿಲ್ಲ ಅಂತ ಸಬೂಬು ಕೊಡುತ್ತಿದ್ದ ಬಿಬಿಎಂಪಿ, ಈಗ ಬೈಕ್ ಆಂಬುಲೆನ್ಸ್​ಗೆ ಹಣವಿದ್ದರೂ ಯೋಜನೆಯನ್ನು ಮಾತ್ರ ಕಾರ್ಯರೂಪಕ್ಕೆ ತರದೇ ಮೀನಾಮೇಷ ಎಣಿಸುತ್ತಿದೆ.‌ ಬೆಂಗಳೂರಿನ 198 ವಾರ್ಡ್ ಗಳಿಗೆ ಅದ್ಯಾವಾಗ ಬೈಕ್ ಆಂಬುಲೆನ್ಸ್ ಸಿಗಲಿದ್ಯೋ ಕಾದು ನೋಡಬೇಕು.

ABOUT THE AUTHOR

...view details