ಬೆಂಗಳೂರು: ದೇವನಹಳ್ಳಿ ತಾಲೂಕಿನ ಬಿಜ್ಜವಾರ ಗ್ರಾಮದ ಸರ್ವೇ ನಂಬರ್ 16 ರಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಶಾಲಾ ಜಮೀನನ್ನು ಇಂದು ಜಿಲ್ಲಾಡಳಿತ ತೆರವುಗೊಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್. ಲತಾ ಅವರ ಸೂಚನೆ ಮೇರೆಗೆ ದೇವನಹಳ್ಳಿ ತಹಶೀಲ್ದಾರ್ ಶಿವರಾಜ್ ಮತ್ತು ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಿಜ್ಜವಾರ ಗ್ರಾಮದ ಸರ್ವೇ ನಂಬರ್ 16 ರಲ್ಲಿ ಸ್ಥಳೀಯ ರೈತರೊಬ್ಬರಿಂದ ಅತಿಕ್ರಮಣವಾಗಿದ್ದ ಒಂದು ಎಕರೆ ಜಾಗವನ್ನು ಸಮೀಕ್ಷೆ ನಡೆಸಿ ತೆರವುಗೊಳಿಸಿದ್ದಾರೆ.
ಬಿಜ್ಜವಾರ ಗ್ರಾಮದ ಸರ್ವೇ ನಂಬರ್ 16 ರಲ್ಲಿ ಸರ್ಕಾರಿ ಶಾಲೆಗೆ ಒಟ್ಟು ಆರು ಎಕರೆ, 33 ಗುಂಟೆ ಭೂಮಿ ಮಂಜೂರಾಗಿತ್ತು. ಅದರಲ್ಲಿ ಒಂದು ಎಕರೆ ಭೂಮಿ ಒತ್ತುವರಿಯಾಗಿತ್ತು. ಕೋರಮಂಗಲ ಗ್ರಾಮದಲ್ಲಿ ಕಳೆದ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಹಾಗೂ ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ಸ್ಥಳೀಯ ರೈತರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಯವರಿಗೆ ಬಿಜ್ಜವಾರ ಗ್ರಾಮದ ಸರ್ಕಾರಿ ಶಾಲಾ ಜಮೀನು ಒತ್ತುವರಿ ತೆರವುಗೊಳಿಸುವಂತೆ ಅರ್ಜಿ ಸಲ್ಲಿಕೆಯಾಗಿತ್ತು.
ಓದಿ:ದಾವಣಗೆರೆ: ಶಾಲಾ ಜಾಗ ಒತ್ತುವರಿ ತೆರವುಗೊಳಿಸಿ ತಹಶೀಲ್ದಾರ್ ಖಡಕ್ ಕ್ರಮ