ಬೆಂಗಳೂರು: ಉತ್ತರ ಕರ್ನಾಟಕ ನೆರೆ ಪರಿಹಾರ ವಿತರಣೆ ವಿಷಯದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ನಡುವೆ ನಡೆಯುತ್ತಿರುವ ಟ್ವಿಟರ್ ವಾರ್ ಮಹತ್ವದ ತಿರುವು ಪಡೆದುಕೊಂಡಿದೆ.
ಡಿವಿಎಸ್ ಅವರು ಟ್ವಿಟರ್ನಲ್ಲಿ ತಮ್ಮನ್ನು ಬ್ಲಾಕ್ ಮಾಡಿರುವುದಾಗಿ ಸೂಲಿಬೆಲೆ ಅವರು ಸ್ವತಃ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಚಿವರ ನಡೆ ವಿರುದ್ಧ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಸಮರ್ಪಕ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ್ದ ಸೂಲಿಬೆಲೆ ಅವರು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಒಂದು ಟ್ವೀಟ್ ಮಾಡಿದ್ದರು. ಅದಾದ ಮರು ದಿನವೇ ಚಕ್ರವತ್ತಿ ಸೂಲಿಬೆಲೆ ಅವರನ್ನುದ್ದೇಶಿಸಿ ಟ್ವಿಟ್ ಮಾಡಿದ್ದ ಡಿವಿಎಸ್, ’‘ಟೀಕೆ- ಟಿಪ್ಪಣಿ, ವಿಮರ್ಶೆ, ಭಿನ್ನ ಅಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ ಅದು ಯಾವ ಮಟ್ಟದಲ್ಲಿರಬೇಕು ಅನ್ನೋದು ಗೊತ್ತಿರಬೇಕು. ಅದು ಬಿಟ್ಟು ವೈಯುಕ್ತಿಕ ನಿಂದನೆ ಇಳಿಯುವವರ ಬಗ್ಗೆ ನನ್ನ ಬಳಿ ಉತ್ತರವಿಲ್ಲ. ಸಂತ್ರಸ್ತರ ಕಣ್ಣೀರು ಒರೆಸಿದ್ದೇವೆ. ಅವರು ನಮ್ಮವರು ಅವರ ಕ್ಷೇಮ, ಭವಿಷ್ಯ ನಮ್ಮ ಜವಾಬ್ದಾರಿ’’ ಎಂದು ಚಾಟಿ ಬೀಸಿದ್ದರು.