ಕರ್ನಾಟಕ

karnataka

ETV Bharat / state

ಬಿಡದಿಯಲ್ಲಿ 11.5 ಮೆ.ವಾ ಸಾಮರ್ಥ್ಯದ ತ್ಯಾಜ್ಯ ವಿದ್ಯುತ್ ಯೋಜನೆ - ಬಿಡದಿ ತ್ಯಾಜ್ಯ ವಿದ್ಯುತ್ ಯೋಜನೆ

ಪ್ರತಿನಿತ್ಯ ಬೆಂಗಳೂರು ನಗರದ 600 ಟನ್ ತ್ಯಾಜ್ಯವನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದಾಗಿದೆ. ಈ ಯೋಜನೆಯನ್ನು 260 ಕೋಟಿ ರೂ. ವೆಚ್ಚದಲ್ಲಿ ರಾಮನಗರದ ಬಿಡದಿಯ ಬಳಿ ಎರಡು ವರ್ಷಗಳ ಅವಧಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

bidadi-plant-to-generate-power-from-bengalurus-waste
ತ್ಯಾಜ್ಯ ವಿದ್ಯುತ್ ಯೋಜನೆ

By

Published : Oct 10, 2020, 2:59 AM IST

ಬೆಂಗಳೂರು:ಮುಖ್ಯಮಂತ್ರಿ ಬಿಎಸ್​ವೈ ಹಾಗೂ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಅಧ್ಯಕ್ಷತೆಯಲ್ಲಿ ನಡೆದ ನಿರ್ದೇಶಕ ಮಂಡಳಿಯ ಸಭೆಯಲ್ಲಿ 11.5 ಮೆ.ವಾ ಸಾಮರ್ಥ್ಯದ ವಿಂಗಡಿಸಿದ ತ್ಯಾಜ್ಯ ವಿದ್ಯುತ್ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮೋದಿಸಲಾಗಿದೆ.

ಈ ವಿದ್ಯುತ್ ಸ್ಥಾವರಕ್ಕೆ ಪ್ರತಿನಿತ್ಯ ಬೆಂಗಳೂರು ನಗರದ 600 ಟನ್ ತ್ಯಾಜ್ಯವನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದಾಗಿದೆ. ಈ ಯೋಜನೆಯನ್ನು 260 ಕೋಟಿ ರೂ. ವೆಚ್ಚದಲ್ಲಿ ರಾಮನಗರದ ಬಿಡದಿಯ ಬಳಿ ಎರಡು ವರ್ಷಗಳ ಅವಧಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಯೋಜನೆಯ ನಿರ್ಮಾಣ ಕಾರ್ಯಾದೇಶ ಪತ್ರವನ್ನು ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್ ವಿ., ನೋಯ್ಡಾ ಮೂಲದ, ಐಎಸ್​​ಜಿಇಸಿ ಹೆವಿ ಎಂಜಿನಿಯರಿಂಗ್​ ಲಿಮಿಟೆಡ್​ಗೆ​​ (ISGEC Heavy Engineering Ltd) ನೀಡಲಾಗಿದೆ. ಈ ಕಂಪನಿಯೊಂದಿಗೆ ವಿಶ್ವದಾದ್ಯಂತ ಸುಮಾರು 900 ಘಟಕಗಳನ್ನು ಸ್ಥಾಪಿಸಿರುವ ಅನುಭವವುಳ್ಳ ಹಿಟಾಚಿ ಝೋಸ್​ (Hitachi Zose) ಕಂಪನಿಯು ಯೋಜನೆಯ ಸಹಭಾಗಿತ್ವವನ್ನು ವಹಿಸಿರುವುದಲ್ಲದೆ, ಇದೇ ರೀತಿಯ ತ್ಯಾಜ್ಯ ವಿದ್ಯುತ್​ ಯೋಜನೆಯನ್ನು ಜಬಲ್ಪುರ್ ಮಧ್ಯಪ್ರದೇಶದಲ್ಲಿ ಸ್ಥಾಪಿಸಿದೆ.

'ಆತ್ಮನಿರ್ಭರ್ ಭಾರತ್' ಯೋಜನೆಯಡಿಯಲ್ಲಿ ಈ ಘಟಕವು ಸ್ಥಾಪಿತವಾಗುತ್ತಿರುವ ಕಾರಣ, ಈ ಯೋಜನೆಯಲ್ಲಿ ಬಳಸುವ ಹೆಚ್ಚಿನ ಉಪಕರಣಗಳು ಸ್ವದೇಶಿಯದ್ದೇ ಆಗಿದ್ದು ಅಂತಾರಾಷ್ಟ್ರೀಯ ಮಟ್ಟದ್ದಾಗಿರುತ್ತದೆ. ಕೆಪಿಸಿಎಲ್ ತ್ಯಾಜ್ಯ ವಿದ್ಯುತ್ ಘಟಕದ ಸ್ಥಾಪನೆಯ ಜವಾಬ್ದಾರಿಯನ್ನು ಸರ್ಕಾರವು ನೀಡಿದ್ದು, ಇದರಿಂದ ಪ್ರತಿದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸುಮಾರು 600 ಟನ್ ತ್ಯಾಜ್ಯವನ್ನು ಸಂಸ್ಕರಿಸಿ ವಿದ್ಯುತ್ ಉತ್ಪಾದಿಸುವ ಮೂಲಕ ನಗರದ ಶೇ.25ರಷ್ಟು ಮಿಶ್ರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿದಂತಾಗುತ್ತದೆ.

ಈ ಯೋಜನೆಯ 260 ಕೋಟಿ ರೂ.ಗಳ ಮೂಲ ಬಂಡವಾಳವನ್ನು ಕೆಪಿಸಿಎಲ್ ಹಾಗೂ ಬಿಬಿಎಂಪಿ ಸಮನಾಗಿ ಹೂಡಲು ಉದ್ದೇಶಿಸಿವೆ ಮತ್ತು ಇದರ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಕೆಪಿಸಿಎಲ್​ಗೆ ವಹಿಸಲಾಗಿದೆ. ಈ ಯೋಜನೆಯಿಂದಾಗಿ ಬಿಬಿಎಂಪಿಯು ವೈಜ್ಞಾನಿಕವಾಗಿ ಮಿಶ್ರ ತ್ಯಾಜ್ಯವನ್ನು ವಿಲೇವಾರಿ ಮಾಡುವುದಲ್ಲದೇ ವಾರ್ಷಿಕವಾಗಿ ಸುಮಾರು 14 ಕೋಟಿಯಷ್ಟು ತ್ಯಾಜ್ಯ ನಿರ್ವಹಣಾ ವೆಚ್ಚವನ್ನು ಸರ್ಕಾರಕ್ಕೆ ಉಳಿಸಿದಂತಾಗುತ್ತದೆ.

ABOUT THE AUTHOR

...view details