ಬೆಂಗಳೂರು : ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸದ ಮೇಲಿನ ದಾಳಿಯ ಕೂಲಂಕಶ ತನಿಖೆ ನಡೆಯದಿದ್ದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಭೋವಿ ಜನಾಂಗ ಪರಿಷತ್ತಿನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಚ್. ರವಿ ಮಾಕಳಿ ಹೇಳಿದರು.
ಬೆಂಗಳೂರಿನ ಜಸ್ಮಾದೇವಿ ಭವನದಲ್ಲಿ ಮಾತನಾಡಿ, ಇಡೀ ಭೋವಿ ಸಮಾಜ ಅವರ ಬೆನ್ನಿಗಿದೆ, ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳುತ್ತಿರುವ ಯುವ ರಾಜಕಾರಣಿಯ ನಿವಾಸದ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಲಾಗಿದೆ. ಅತ್ಯಂತ ಹಿಂದುಳಿದ ಸಮಾಜದ ನಾವು ಶ್ರಮಜೀವಿಗಳಾಗಿದ್ದು, ನಮ್ಮ ಸಮುದಾಯದ ನಾಯಕನ ಮನೆ ಮೇಲೆ ನಡೆದಿರುವ ದಾಳಿ ಆಘಾತ ತಂದಿದೆ. ಸರ್ಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ. ಸ್ವಲ್ಪ ದಿನ ಕಾದು ನೋಡುತ್ತೇವೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.