ಬೆಂಗಳೂರು:ಬಿಬಿಎಂಪಿ ಕಾಯ್ದೆ 2020 ಪ್ರಕಾರ ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ 30 ತಿಂಗಳು ಅವಕಾಶ ಕಲ್ಪಿಸಲಾಗಿದ್ದು, ಅದೇ ರೀತಿ ರಾಜ್ಯದ ಇತರ ನಗರ ಸ್ಥಳೀಯ ಸಂಸ್ಥೆಗಳ ಮೇಯರ್ ಮತ್ತು ಉಪ ಮೇಯರ್ ಅವಧಿಯನ್ನು 30 ತಿಂಗಳಿಗೆ ಹೆಚ್ಚಿಸಲು ಕೆಎಂಸಿ ಕಾಯ್ದೆ 1976 ಗೆ ತಿದ್ದುಪಡಿ ತರುವಂತೆ ಶಿಫಾರಸು ಮಾಡಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗೆ ನೀಡಿರುವ ಮೀಸಲಾತಿ ಖಾತರಿಪಡಿಸಲು ಆಯಾ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ರಚಿಸಲಾಗಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ನೇತೃತ್ವದ ಆಯೋಗ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರದಿ ಸಲ್ಲಿಕೆ ಮಾಡಿತು.
ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಿ ಈ ಸಮುದಾಯಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸುವ ಸಂಬಂಧ ಅಧ್ಯಯನ ನಡೆಸಿ ವರದಿ ಸಲ್ಲಿಕೆ ಮಾಡಲಾಗಿದ್ದು, ಹಲವು ಶಿಫಾರಸುಗಳನ್ನು ವರದಿ ಒಳಗೊಂಡಿದೆ. ವರದಿಯಲ್ಲಿ ಸಾಮಾಜಿಕ, ರಾಜಕೀಯ ಮೀಸಲಾತಿ ಒಪ್ಪಿಗೆ ಸೂಚಿಸುವ ಉಲ್ಲೇಖ ಮಾಡಲಾಗಿದ್ದು, ಹಿಂದುಳಿದ ವರ್ಗಗಳ A ಮತ್ತು B ವರ್ಗಕ್ಕೆ ಶೇ 33 ರಷ್ಟು ಮೀಸಲಾತಿ ನೀಡಲು ನ್ಯಾ.ಭಕ್ತ ವತ್ಸಲ ನೇತೃತ್ವದ ಆಯೋಗ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ಒಟ್ಟಾರೆ, ಮೀಸಲಾತಿಯಲ್ಲಿ ಶೇಕಡಾ50 ರಷ್ಟು ಮೀರದಂತೆ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದ್ದು, ಹಿಂದುಳಿದ ವರ್ಗಗಳಿಗೆ ಬಿಬಿಎಂಪಿಯಲ್ಲಿ ಮೇಯರ್, ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ನೀಡಬಹುದು. ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಭಾಗವನ್ನು ಡಿಪಿಎಆರ್ ಅಧೀನದಲ್ಲಿ ತರಬೇಕು, ರಾಜ್ಯದ ಎಲ್ಲಾ ಮಹಾನಗರ ಪಾಲಿಕೆಗಳ ಮೇಯರ್, ಉಪ ಮೇಯರ್ ಅವಧಿಯನ್ನ 30 ತಿಂಗಳಿಗೆ ಹೆಚ್ಚಳಕ್ಕೆ ಸಲಹೆ ನೀಡಲಾಗಿದೆ. ಮೇಯರ್, ಉಪ ಮೇಯರ್ ಸ್ಥಾನಕ್ಕೆ ಈ ಹಿಂದೆ ಇದ್ದ ಒಂದು ವರ್ಷದ ಅವಧಿ ಹೆಚ್ಚಿಸಲು ಸಲಹೆ ನೀಡಿದೆ.