ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾದ ಕರ್ನಾಟಕ ಹಾಲು ಮಾರಾಟ ಮಹಾಮಂಡಳಿ ಕೆಎಂಎಫ್ನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಭೀಮಾ ನಾಯಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಿಗದಿಪಡಿಸಲಾಗಿದ್ದ ಚುನಾವಣೆಯಲ್ಲಿ ಮಾಜಿ ಶಾಸಕ ಭೀಮಾ ನಾಯಕ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಕೆ ಮಾಡದಿರುವ ಹಿನ್ನೆಲೆಯಲ್ಲಿ ಭೀಮಾ ನಾಯಕ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಲಾಗಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿಯವರು ಕೆಎಂಎಫ್ ಅಧ್ಯಕ್ಷರಾಗಿ ನೇಮಕವಾಗಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸರ್ಕಾರವು ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಪ್ರತಿನಿಧಿಗಳಾಗಿ ನೇಮಕಗೊಂಡಿದ್ದ ಎಲ್ಲಾ ನಿಗಮ ಮಂಡಳಿ ಹಾಗೂ ಸಹಕಾರ ಸಂಸ್ಥೆಗಳ ನಿರ್ದೇಶಕರ ಆಯ್ಕೆಯನ್ನು ರದ್ದುಪಡಿಸಿತ್ತು. ಬಿಜೆಪಿ ಆಡಳಿತದ ಅವಧಿಯಲ್ಲಿ ಕೆಎಂಎಫ್ ನಿರ್ದೇಶಕರಾಗಿ ನೇಮಕಗೊಂಡಿದ್ದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿಯವರ ನಾಮನಿರ್ದೇಶನ ನೇಮಕ ಅವಧಿಯೂ ಪೂರ್ಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ಘೋಷಣೆ ಮಾಡಲಾಗಿತ್ತು.
ಬುಧವಾರ ನಡೆದ ಚುನಾವಣೆಯಲ್ಲಿ ಕೆಎಂಎಫ್ ನಿರ್ದೇಶಕರಾಗಿದ್ದ ಮಾಜಿ ಶಾಸಕ ಭೀಮಾ ನಾಯಕ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಕೆಎಂಎಫ್ ನಿರ್ದೇಶಕರುಗಳಲ್ಲಿ ಬೇರೆ ಯಾರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಮಾಡದೇ ಇರುವ ಹಿನ್ನೆಲೆಯಲ್ಲಿ ಭೀಮಾನಾಯಕ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆಯೂ ಭೀಮಾ ನಾಯಕ್ ಪ್ರಯತ್ನಿಸಿ ವಿಫಲರಾಗಿದ್ದರು. ಈ ಬಾರಿ ಅವರಿಗೆ ಅಧ್ಯಕ್ಷ ಸ್ಥಾನದ ಅದೃಷ್ಟ ಒಲಿದಿದೆ.