ಬೆಂಗಳೂರು:ನಗರದ ಪೊಲೀಸರಲ್ಲಿ ಕೊರೊನಾ ಸೋಂಕು ದಿನೇ ದಿನೆ ಹೆಚ್ಚಾಗುತ್ತಿರುವ ಕಾರಣ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಿಬ್ಬಂದಿಗೆ ವಾಟ್ಸಪ್ ಗ್ರೂಪ್ ಮಾಡಿ ಮನೋಸ್ಥೈರ್ಯ ತುಂಬುತ್ತಿದ್ದಾರೆ.
ಕೊರೊನಾ ಸೋಂಕು ಪತ್ತೆಯಾದ ತಕ್ಷಣ ಪೊಲೀಸ್ ಸಿಬ್ಬಂದಿಯನ್ನು ಸಂಬಂಧಿಸಿದ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ನಂತರ ಅವರು ವೈರಸ್ ಭಯದಿಂದ ಕುಗ್ಗಬಾರದು ಹಾಗೂ ಪ್ರಾಣ ಕಳೆದುಕೊಳ್ಳುವ ಆಲೋಚನೆ ಮಾಡಬಾರದು ಎನ್ನುವ ನಿಟ್ಟಿನಲ್ಲಿ ಸಿಬ್ಬಂದಿ ವಾಟ್ಸಪ್ ಗ್ರೂಪ್ ಮಾಡಿ ಮನೋಬಲ ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈಗಾಗಲೇ ಕೊರೊನಾ ಸೋಂಕಿಗೆ ಒಳಗಾದವರನ್ನು ಸಂಪರ್ಕಿಸಿ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ. ಅಲ್ಲದೇ ಯಾವ ಸಿಬ್ಬಂದಿಯೂ ಕೂಡಾ ಕ್ರಿಟಿಕಲ್ ಕಂಡಿಷನ್ ಹಂತವನ್ನು ತಲುಪಿಲ್ಲ. ಈಗಾಗಲೇ ಅವರೆಲ್ಲ ಚಿಕಿತ್ಸೆ ಪಡೆದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಾರ ಕೂಡ ಪೊಲೀಸರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದ್ದು, ಸಿಸಿಸಿ ಕೊರೊನಾ ಕೇರ್ ಸೆಂಟರ್ ಅಂತಾ ಮಾಡಿದೆ. ಇಲ್ಲಿ ಕೂಡ ಪೊಲೀಸರನ್ನ ಇರಿಸಲಾಗಿದೆ. ಹಾಗೆ ಕೊರೊನಾಕ್ಕೆ ಭಯ ಬಿದ್ದು ದಯಮಾಡಿ ಯಾರು ಪ್ರಾಣ ಕಳೆದುಕೊಳ್ಳಬೇಡಿ. ಇವತ್ತು ಮಹಿಳೆಯೊಬ್ಬರು ಹಾಗೆಯೇ ಕಳೆದೆರಡು ದಿನಗಳ ಹಿಂದೆ ನಮ್ಮ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂತಹ ದುಡುಕು ನಿರ್ಧಾರದಿಂದ ಜನರನ್ನ ಮತ್ತಷ್ಟು ಆತಂಕಗೊಳಿಸುವುದು ಬೇಡ ಎಂದು ಮನವಿ ಮಾಡಿದ್ದಾರೆ.