ಬೆಂಗಳೂರು: ಕೇಂದ್ರ ಸರ್ಕಾರಭೂ ಸುಧಾರಣಾ ಮಸೂದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ನಾಳೆ ಭಾರತ್ ಬಂದ್ಗೆ ನಡೆಸಲಿವೆ. ಈ ಹಿನ್ನೆಲೆ ಕರ್ನಾಟಕದಲ್ಲಿ ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದ ವಿರುದ್ಧ ಶವಯಾತ್ರೆ ಮಾಡಿ ಪ್ರತಿಭಟಿಸುವುದಾಗಿ ರಾಜ್ಯ ರೈತ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಪ್ರತಿಭಟನೆಯ ರೂಪುರೇಷೆಯ ಕುರಿತು ನಗರದಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 10 ಗಂಟೆಗೆ ಟೌನ್ಹಾಲ್ನಿಂದ ಶವಯಾತ್ರೆ ನಡೆಸಲಾಗುತ್ತೆ. ನಂತರ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ನಾಯಂಡಹಳ್ಳಿ, ಆನೇಕಲ್ ಸುತ್ತಮುತ್ತ ಭಾಗಗಳಲ್ಲೂ ಬಂದ್ ನಡೆಯಲಿದೆ. ಕಡಿಮೆ ಸಮಯದಲ್ಲೇ ಬಂದ್ಗೆ ಕರೆ ನೀಡಲಾಗಿದ್ರೂ ಇದು ಯಶಸ್ವಿಯಾಗಲಿದೆ. ಸಾರ್ವಜನಿಕರು ರೈತರ ಪರವಾಗಿ ನಿಂತು ಬಂದ್ಗೆ ಬೆಂಬಲ ನೀಡಬೇಕೆಂದು ಎಂದು ವಿನಂತಿಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ನಾಳೆಗೆ 4 ತಿಂಗಳು ಪೂರೈಸಲಿದೆ. ಹೀಗಾಗಿ, ನಾಳೆ ( ಮಾರ್ಚ್ 26) ಭಾರತ್ ಬಂದ್ಗೆ ಕಿಸಾನ್ ಸಂಯುಕ್ತ ಮೋರ್ಚಾ ಕರೆ ನೀಡಿದೆ. ಈ ಕುರಿತು ವಿವಿಧ ಸಂಘಟನೆಯ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಬಂದ್ಗೆ ನೈತಿಕ ಬೆಂಬಲ ನೀಡುತ್ತೇವೆ:ಕೋವಿಡ್ ಹಿನ್ನೆಲೆ ಆಟೋ ಚಾಲಕರಂತೆಯೇ ಬೀದಿಬದಿ ವ್ಯಾಪಾರಿಗಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ರೈತರ ಹೋರಾಟಕ್ಕೆ ಸದಾ ನಮ್ಮ ಬೆಂಬಲ ಇರುತ್ತದೆ. ರೈತರು ಇದ್ರೆ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡಲು ಸಾಧ್ಯ. ರೈತರ ಹೋರಾಟಕ್ಕೆ ಜಯವಾಗಲಿ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವರ ಬೆಂಬಲಕ್ಕೆ ನಿಂತುಕೊಳ್ಳಬೇಕು. ರೈತರ ಬಂದ್ಗೆ ನಾವು ನೈತಿಕ ಬೆಂಬಲ ನೀಡುತ್ತೇವೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.