ಬೆಂಗಳೂರು: ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ, ಪ್ರಾಧ್ಯಾಪಕ ಸಿಎನ್ಆರ್ ರಾವ್ ಪ್ರತಿಷ್ಠಿತ ಅಂತಾರಾಷ್ಟ್ರೀಯ ಇಎನ್ಐ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಇದು ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಸಂಗ್ರಹಣೆಯ ಕುರಿತಾದ ಸಂಶೋಧನೆಗಾಗಿ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿಯನ್ನ ನೊಬೆಲ್ ಪ್ರಶಸ್ತಿಗೆ ಸಮಾನ ಎಂದು ಪರಿಗಣಿಸಲಾಗಿದೆ.
ಅಕ್ಟೋಬರ್ 14 ರಂದು ರೋಮ್ನ ಕ್ವಿರಿನಲ್ ಪ್ಯಾಲೇಸ್ನಲ್ಲಿ ನಡೆಯಲಿರುವ ಅಧಿಕೃತ ಸಮಾರಂಭದಲ್ಲಿ ಇಟಲಿ ಅಧ್ಯಕ್ಷ ಸೆರ್ಗಿಯೋ ಮ್ಯಾಟರೆಲ್ಲಾ ಭಾಗವಹಿಸಿ ಇಎನ್ಐ ಅವಾರ್ಡ್ಸ್ 2020 ಅನ್ನು ಪ್ರದಾನ ಮಾಡಲಿದ್ದಾರೆ.
ಇಂಧನ ಮತ್ತು ಪರಿಸರ ಸಂಶೋಧನಾ ಕ್ಷೇತ್ರದಲ್ಲಿ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಈ ಪ್ರಶಸ್ತಿ, ಇಂಧನ ಮೂಲಗಳ ಉತ್ತಮ ಬಳಕೆಯನ್ನು ಉತ್ತೇಜಿಸುವ ಮತ್ತು ಹೊಸ ತಲೆಮಾರಿನ ಸಂಶೋಧಕರನ್ನು ತಮ್ಮ ಕೆಲಸದಲ್ಲಿ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಗಳ ಮೇಲೆ ಇಎನ್ಐ ಇರಿಸಿದ ಪ್ರಾಮುಖ್ಯತೆಗೆ ಇದು ಸಾಕ್ಷಿಯಾಗಿದೆ.