ಬೆಂಗಳೂರು: ತಮಿಳುನಾಡಿನಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಸಾಗಿರುವ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಗೆ ಕರ್ನಾಟಕದಲ್ಲಿ ಈ ಮಟ್ಟದ ಯಶಸ್ಸು ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಕಾಂಗ್ರೆಸ್ ನಾಯಕರ ಆಂತರಿಕ ಭಿನ್ನಾಭಿಪ್ರಾಯ, ರಾಜ್ಯ ಬಿಜೆಪಿ ಸರ್ಕಾರದ ತಂತ್ರಗಾರಿಕೆ, ಪಕ್ಷಕ್ಕೆ ಮುಜುಗರ ತರುವಂತಹ ಸನ್ನಿವೇಶಗಳು ನಿರ್ಮಾಣವಾಗುವ ಸೂಚನೆಗಳು ಕಾಣಿಸುತ್ತಿದ್ದು, ಇವೆಲ್ಲವೂ ಭಾರತ್ ಜೋಡೋ ಯಾತ್ರೆಯ ಯಶಸ್ಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ಸಭೆಗಳಿಂದ ಹಿಂದುಳಿದ ಸಿದ್ದರಾಮಯ್ಯ:ಭಾರತ ಜೋಡೋ ಯಾತ್ರೆ ಯಶಸ್ವಿಗೆ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸರ್ವ ಪ್ರಯತ್ನ ನಡೆಸಿದ್ದು ಒಂದು ಹಂತದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನ ದೂರವಿಟ್ಟಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಯಾತ್ರೆ ಯಶಸ್ವಿಗೊಳಿಸುವ ಸಂಬಂಧ ನಡೆಸಿರುವ ಐದಾರು ಸಭೆಗಳಲ್ಲಿ ಹೆಚ್ಚಿನ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಿಲ್ಲ.
ಸಭೆಗೆ ಆಗಮಿಸುವಂತೆ ಇವರಿಗೆ ಅಧಿಕೃತ ಆಹ್ವಾನವೇ ಲಭಿಸಿಲ್ಲ ಎಂಬ ಮಾಹಿತಿ ಇದೆ. ಯಾತ್ರೆ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪಕ್ಷದ ಎಲ್ಲ ರಾಜ್ಯ ನಾಯಕರನ್ನು ಒಂದುಗೂಡಿಸುವಲ್ಲಿಯೇ ರಾಜ್ಯ ಕಾಂಗ್ರೆಸ್ ವಿಫಲವಾಗಿದೆ ಎಂಬ ಮಾಹಿತಿ ಬಲವಾಗಿ ಕೇಳಿ ಬರುತ್ತಿದೆ.
ವಲಸಿಗರ ಕಡೆಗಣನೆ : ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಅಧಿಕಾರವಹಿಸಿಕೊಂಡ ಸಂದರ್ಭದಲ್ಲಿ ರಾಜ್ಯದಲ್ಲಿ ಮೂಲ ಮತ್ತು ವಲಸಿಗ ಕಾಂಗ್ರೆಸ್ಸಿಗರ ನಡುವಿನ ತಿಕ್ಕಾಟ ನಡೆದುಕೊಂಡೇ ಬಂದಿದೆ. ಇದಕ್ಕೆ ಪೂರಕ ಎಂಬಂತೆ ಇದೀಗ ಮೂಲ ಕಾಂಗ್ರೆಸ್ ನಾಯಕರು ವಲಸಿಗ ಕಾಂಗ್ರೆಸ್ ನಾಯಕರನ್ನು ಭಾರತ ಜೋಡೋ ಯಾತ್ರೆಯ ಪೂರ್ವಭಾವಿ ಸಿದ್ಧತೆಯಿಂದ ದೂರವಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಕಳೆದ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲೂ ಸಿದ್ದರಾಮಯ್ಯಗೆ ಸಮರ್ಪಕ ಮಾಹಿತಿ ನೀಡಿರಲಿಲ್ಲ.
ಕಾಂಗ್ರೆಸ್ ಶಾಸಕಾಂಗ ಸಭೆಗೂ ಮುನ್ನ ಖಾಸಗಿ ಹೋಟೆಲ್ನಲ್ಲಿ ಮಾಜಿ ಸಚಿವರ ಸಭೆಯನ್ನು ಕರೆದು ಅಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಯಾತ್ರೆಯ ಯಶಸ್ವಿನ ಕುರಿತು ಚರ್ಚಿಸಿದ್ದರು. ಈ ವೇಳೆ, ಎದುರು ಬದುರು ಹಾಲ್ನಲ್ಲಿ ಶಾಸಕಾಂಗ ಸಭೆ ಹಾಗೂ ಭಾರತ್ ಜೋಡೋ ಪಾದಯಾತ್ರೆಗೆ ಮೀಟಿಂಗ್ ಆಯೋಜಿಸಲಾಗಿತ್ತು. ಸಿದ್ದರಾಮಯ್ಯ ಶಾಸಕಾಂಗ ಸಭೆಗೆ ಆಗಮಿಸುವ ವೇಳೆಗೆ ಭಾರತ್ ಜೋಡೋ ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಡಿ.ಕೆ.ಶಿವಕುಮಾರ್ ಕುಳಿತಿದ್ದರು.
ನನ್ನನ್ನು ಆಹ್ವಾನಿಸಿಲ್ಲ :ತಮ್ಮನ್ನು ಆಹ್ವಾನಿಸದ ಸಭೆಯಲ್ಲಿ ಪಾಲ್ಗೊಳ್ಳುವ ಮನಸ್ಸು ಮಾಡದ ಸಿದ್ದರಾಮಯ್ಯ ಶಾಸಕಾಂಗ ಸಭೆ ನಡೆಯುವ ಸಭಾಂಗಣದಲ್ಲಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ವಿಧಾನ ಸಭೆ ಕಾಂಗ್ರೆಸ್ ಪಕ್ಷದ ಸಚೇತಕ ಅಜಯ್ ಸಿಂಗ್ ಹಾಗೂ ವಿಧಾನಪರಿಷತ್ ಸದಸ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾಜಿ ಸಚಿವರ ಸಭೆಗೆ ಆಗಮಿಸುವಂತೆ ಆಹ್ವಾನಿಸಿದರು. ಆದರೆ, ಸಿದ್ದರಾಮಯ್ಯ ಈ ಆಹ್ವಾನವನ್ನು ನೇರವಾಗಿ ತಿರಸ್ಕರಿಸಿದರು.
ಸಿದ್ದರಾಮಯ್ಯ ಭಾವಚಿತ್ರ ನಾಪತ್ತೆ : ‘ನನಗೆ ಭಾರತ್ ಜೋಡೋ ಮೀಟಿಂಗ್ ಹೇಳಿಲ್ಲ, ಕರೆದಿಲ್ಲ ಮಾಡಿಲ್ಲ, ನಾನ್ಯಾಕೆ ಬರಲಿ’ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ವಿಡಿಯೋ ವೈರಲ್ ಆಗಿದೆ. ಇನ್ನೊಂದೆಡೆ ರಾಯಚೂರಿನಲ್ಲಿ ನಡೆದ ಭಾರತ್ ಜೋಡೋ ಪಾದಯಾತ್ರೆ ಪೂರ್ವಭಾವಿ ಸಭೆಗೆಂದು ಅಳವಡಿಸಿದ್ದ ಫ್ಲೆಕ್ಸ್ನಲ್ಲಿ ಸಿದ್ದರಾಮಯ್ಯ ಭಾವಚಿತ್ರ ನಾಪತ್ತೆಯಾಗಿತ್ತು. ಇದು ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.
ಈ ವಿಚಾರವಾಗಿ ಡಿಕೆ ಶಿವಕುಮಾರ್ಗೆ ಕೇಳಿದ ಪ್ರಶ್ನೆಗೆ ನಾನು ಆಗಮಿಸಿದ್ದೇನೆ ನನ್ನ ಫ್ಲೆಕ್ಸ್ ಹಾಕಿದ್ದಾರೆ, ಸಿದ್ದರಾಮಯ್ಯ ಬಂದಾಗ ಅವರ ಫ್ಲೆಕ್ಸ್ ಹಾಕುತ್ತಾರೆ. ಈ ವಿಚಾರವಾಗಿ ಅನಗತ್ಯ ಗೊಂದಲ ಸೃಷ್ಟಿಸುವ ಅಗತ್ಯ ಇಲ್ಲ ಎಂದಿದ್ದರು.