ಕರ್ನಾಟಕ

karnataka

ETV Bharat / state

ಭಾರತ್ ಜೋಡೋ ಯಾತ್ರೆ: ಜನ ಸೇರಿಸದವರಿಗೆ ಟಿಕೆಟ್ ಕೈ ತಪ್ಪುವ ಆತಂಕ - bharat jodo yatra

ಭಾರತ್ ಜೋಡೋ ಯಾತ್ರೆ ರಾಜ್ಯದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ದೊಡ್ಡ ಕೊಡುಗೆಯಾಗಿ ಲಭಿಸಿದೆ. ರಾಷ್ಟ್ರೀಯ ನಾಯಕರನ್ನು ಮೆಚ್ಚಿಸಲು ಹೆಚ್ಚು ಹೆಚ್ಚು ಜನರನ್ನು ಸೇರಿಸುವ ಮೂಲಕ ವಿಶ್ವಾಸ ಗಿಟ್ಟಿಸಿಕೊಳ್ಳುವ ಸುವರ್ಣಾವಕಾಶ ಒದಗಿಸಿದೆ.

bharat jodo yatra
ಭಾರತ್ ಜೋಡೋ ಯಾತ್ರೆ

By

Published : Oct 12, 2022, 2:39 PM IST

ಬೆಂಗಳೂರು: ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆಗೆ ಜನರನ್ನು ಸೇರಿಸಲು ವಿಫಲರಾದ ಕೆಲ ನಾಯಕರಿಗೆ ಇದೀಗ ಮುಂದಿನ ವಿಧಾನಸಭಾ ಚುನಾವಣೆಗೆ ಟಿಕೆಟ್ ಕೈತಪ್ಪುವ ಭೀತಿ ಶುರುವಾಗಿದೆ.

2023 ರ ವಿಧಾನಸಭೆ ಚುನಾವಣೆ ಸಲುವಾಗಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ರಾಜ್ಯದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ದೊಡ್ಡ ಕೊಡುಗೆಯಾಗಿ ಲಭಿಸಿದೆ. ರಾಷ್ಟ್ರೀಯ ನಾಯಕರನ್ನು ಮೆಚ್ಚಿಸಲು ಹೆಚ್ಚು ಹೆಚ್ಚು ಜನರನ್ನು ಸೇರಿಸುವ ಮೂಲಕ ವಿಶ್ವಾಸ ಗಿಟ್ಟಿಸಿಕೊಳ್ಳುವ ಸುವರ್ಣಾವಕಾಶವನ್ನು ಒದಗಿಸಿದೆ.

ಈ ಸಂದರ್ಭದಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ನಾಯಕರೂ ತಮ್ಮ ಶಕ್ತಿ ಮೀರಿ ಯಾತ್ರೆಗೆ ಜನರನ್ನು ಸೇರಿಸುವ ಯತ್ನ ಮಾಡುತ್ತಿದ್ದಾರೆ. ಆದರೆ, ಇಲ್ಲೂ ಕೆಲವರು ಜನರನ್ನು ಸೇರಿಸುವಲ್ಲಿ ವಿಫಲವಾಗಿದ್ದಾರೆ. ಪ್ರತಿ ಮುಖಂಡನಿಗೆ ಆತನ ಸ್ಥಾನ ಆಧರಿಸಿ ಇಂತಿಷ್ಟು ಜನರನ್ನು ಸೇರಿಸುವ ಗುರಿಯನ್ನು ಪಕ್ಷದ ರಾಜ್ಯ ನಾಯಕರು ನೀಡಿದ್ದರು. ಆದರೆ, ಈ ಕಾರ್ಯದಲ್ಲಿ ಕೆಲವರು ವಿಫಲವಾಗಿದ್ದಾರೆ. ಅವರಿಗೀಗ ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗದಿದ್ದರೆ ಏನು ಮಾಡುವುದು ಎಂಬ ಚಿಂತೆ ಕಾಡಲಾರಂಭಿಸಿದೆ.

ಭಾರತ್ ಜೋಡೋ ಯಾತ್ರೆ

ಇದನ್ನೂ ಓದಿ:ಇಂದು ಚಳ್ಳಕೆರೆಯಿಂದ ಭಾರತ್ ಜೋಡೋ ಪಾದಯಾತ್ರೆ: ರಾಹುಲ್​ ಎದುರು ವಿದ್ಯಾರ್ಥಿನಿ ಭರತನಾಟ್ಯ

ಕಾಂಗ್ರೆಸ್ ಸೇರ್ಪಡೆಯಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಲು ಯತ್ನಿಸುತ್ತಿರುವ ಸಾಕಷ್ಟು ನಾಯಕರು ಯಾತ್ರೆಯ ಸದ್ಬಳಕೆ ಮಾಡಿಕೊಂಡಿದ್ದಾರೆ. ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಕಳೆದ ಶನಿವಾರ ತಮ್ಮ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಯಾತ್ರೆ ಹಾದು ಹೋದ ಸಂದರ್ಭದಲ್ಲಿ ತಾವು ಪಾಲ್ಗೊಂಡರಲ್ಲದೇ, ಸಾವಿರಾರು ಬೆಂಬಲಿಗರನ್ನು ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ.

ಇದರಿಂದ ಪಕ್ಷದ ಹೈಕಮಾಂಡ್ ನಾಯಕರಾದ ರಣದೀಪ್ ಸಿಂಗ್ ಸುರ್ಜೇವಾಲಾ, ಕೆ.ಸಿ. ವೇಣುಗೋಪಾಲ್ ಅತ್ಯಂತ ಸಂತಸ ವ್ಯಕ್ತಪಡಿಸಿದ್ದು, ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಆದರೆ, ಪಕ್ಷದಲ್ಲಿ ಹಿಂದೆ ಟಿಕೆಟ್ ಪಡೆದು ಶಾಸಕರಾಗಿದ್ದವರು, ಸಚಿವರಾಗಿದ್ದವರು ಕೆಲವರು ಯಾತ್ರೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಜನರನ್ನು ಸೇರಿಸುವಲ್ಲಿ ವಿಫಲವಾಗಿದ್ದಾರೆ.

ಭಾರತ್ ಜೋಡೋ ಯಾತ್ರೆ

ಇದನ್ನೂ ಓದಿ:ಮಂಡ್ಯ: ಭಾರತ್​ ಜೋಡೋ ಯಾತ್ರೆಯಲ್ಲಿ ಅಪಾರ ಸಂಖ್ಯೆಯ ಜನ ಭಾಗಿ

ಮಾಜಿ ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಜಮೀರ್ ಅಹಮದ್ ಖಾನ್ ಮತ್ತಿತರ ನಾಯಕರು ನಿರೀಕ್ಷಿತ ಪ್ರಮಾಣದಲ್ಲಿ ಜನರನ್ನು ಸೇರಿಸುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಅದನ್ನು ಗಮನಿಸಿದ ರಾಷ್ಟ್ರೀಯ ನಾಯಕರು ತರಾಟೆಗೂ ತೆಗೆದುಕೊಂಡಿದ್ದಾರೆ. ಯಾತ್ರೆ ಯಶಸ್ಸನ್ನು ಸೂಕ್ಷ್ಮವಾಗಿ ಹೈಕಮಾಂಡ್ ಗಮನಿಸುತ್ತಿದ್ದು, ಈ ಸಂದರ್ಭ ವಿಫಲವಾದ ನಾಯಕರಿಗೆ ಮುಂದೆ ಟಿಕೆಟ್ ಕೈತಪ್ಪಿದರೂ ಅಚ್ಚರಿ ಇಲ್ಲ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಹದೇವಪ್ಪ, ಜಮೀರ್ ಅಹಮದ್ ನಡೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದ್ದು, ಅರಿವಿದ್ದರೂ ಇವರು ಯಾಕೆ ಜನರನ್ನು ಸೇರಿಸಿಲ್ಲ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಕಾಂಗ್ರೆಸ್ ಶಾಸಕರು ಇಲ್ಲದ ಹಾಸನ, ಮಂಡ್ಯ ಮುಂತಾದ ಜಿಲ್ಲೆಯ ಕೆಲ ಕ್ಷೇತ್ರಗಳಲ್ಲಿ ಪಾದಯಾತ್ರೆ ಸಾಗುವಾಗ ಬೆಂಗಳೂರು ಇಲ್ಲವೇ ಬೇರೆ ಭಾಗದಿಂದ ಜನರನ್ನು ಕರೆದೊಯ್ಯುವ ಕಾರ್ಯವನ್ನು ಕೆಲವರು ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಮಾಜಿ ಗೃಹ ಸಚಿವ ಕೆ.ಜೆ. ಜಾರ್ಜ್ ರಾಷ್ಟ್ರೀಯ ನಾಯಕರ ದೊಡ್ಡ ಮಟ್ಟದ ಮೆಚ್ಚುಗೆ ಸಹ ಗಳಿಸಿದ್ದಾರೆ.

ಇದನ್ನೂ ಓದಿ:ಮಂಡ್ಯ: ಭಾರತ್​ ಜೋಡೋ ಯಾತ್ರೆಯಲ್ಲಿ ಅಪಾರ ಸಂಖ್ಯೆಯ ಜನ ಭಾಗಿ

ಕಾಂಗ್ರೆಸ್​ರೇತರ ಶಾಸಕರು ಇರುವ ಕ್ಷೇತ್ರದಲ್ಲಿ ಸಾಗಿದ ಸಂದರ್ಭದಲ್ಲಿಯೂ ಭಾರತ್ ಜೋಡೋ ಯಾತ್ರೆಗೆ ಜನ ಬೆಂಬಲದ ಕೊರತೆ ಎದುರಾಗಿಲ್ಲ. ಕರ್ನಾಟಕದ ಪಾಲಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಹ ಇದು ಸಹಕಾರಿಯಾಗುವ ಲಕ್ಷಣ ತೋರಿಸಿದೆ.

ಯಾತ್ರೆ ಮಾರ್ಗ ಗಮನಿಸಿದರೆ ಕಾಂಗ್ರೆಸ್ ಸಂಸದ, ಶಾಸಕರು ಇಲ್ಲದ ಕ್ಷೇತ್ರದಲ್ಲೇ ಹೆಚ್ಚಾಗಿ ಸಂಚರಿಸುತ್ತಿದೆ. ಕಾಂಗ್ರೆಸ್‌ನಿಂದ ಪ್ರತಿನಿಧಿಯನ್ನು ಹೊಂದಿರದ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸುತ್ತಿದೆ. ಇನ್ನು ಈ ವ್ಯಾಪ್ತಿಯಲ್ಲಿ ಬರುವ 21 ವಿಧಾನಸಭಾ ಕ್ಷೇತ್ರಗಳಲ್ಲಿ ಕೇವಲ ಆರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ.

ಚಾಮರಾಜನಗರದಿಂದ ರಾಯಚೂರಿನವರೆಗೆ ಮಧ್ಯ ಕರ್ನಾಟಕದಲ್ಲಿ ಸಾಗಿರುವ ಯಾತ್ರೆಯಲ್ಲಿ ಬಿಜೆಪಿ ಅಥವಾ ಜೆಡಿಎಸ್ ಪ್ರತಿನಿಧಿಸುವ 15 ಕ್ಷೇತ್ರ ಬರುತ್ತವೆ. ಚಾಮರಾಜನಗರ, ಮೈಸೂರು, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಸೇರಿದಂತೆ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಪ್ರತಿನಿಧಿಸುತ್ತಿದ್ದು, ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿರುವ ಸುಮಲತಾ ಅಂಬರೀಶ್​ ಪ್ರತಿನಿಧಿಸುತ್ತಿದ್ದಾರೆ.

ಭಾರತ್ ಜೋಡೋ ಯಾತ್ರೆ

ಇದನ್ನೂ ಓದಿ:ಕಾಂಗ್ರೆಸ್​​ ಮಾಡುತ್ತಿರುವುದು ಭಾರತ ಜೋಡೋ ಅಲ್ಲ, ಅದು ಭಾರತ ತೋಡೋ: ನಳಿನ್​ ಕುಮಾರ್​ ಕಟೀಲ್

ಯಾತ್ರೆ ಸಾಗಿರುವ ಮಾರ್ಗದ ಪೈಕಿ ನಂಜನಗೂಡು, ಚಾಮುಂಡೇಶ್ವರಿ, ಶ್ರೀರಂಗಪಟ್ಟಣ, ಮೇಲುಕೋಟೆ, ನಾಗಮಂಗಲ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಏತರ ಶಾಸಕರು ಇದ್ದಾರೆ. ಡಾ.ಯತೀಂದ್ರ ಪ್ರತಿನಿಧಿಸುವ ವರುಣಾ ಕ್ಷೇತ್ರ ಒಳಗೊಂಡಂತೆ ತನ್ವೀರ್ ಸೇಠ್ ಪ್ರತಿನಿಧಿಸುವ ನರಸಿಂಹರಾಜ ಮತ್ತು ಅನಿಲ್ ಕುಮಾರ್ ಸಿ ಪ್ರತಿನಿಧಿಸುವ ಹೆಚ್.ಡಿ.ಕೋಟೆ ಕ್ಷೇತ್ರ ಮಾತ್ರ ಕೈ ವಶದಲ್ಲಿದೆ.

ಮುಂದುವರಿದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಹಿರಿಯೂರು, ಮೊಳಕಾಲುಮೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಚಳ್ಳಕೆರೆಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕ ಟಿ ರಘುಮೂರ್ತಿ ಇದ್ದಾರೆ, ಆದರೆ ರಾಯಚೂರು ಗ್ರಾಮಾಂತರ ಮತ್ತು ಬಳ್ಳಾರಿ ಗ್ರಾಮಾಂತರದಲ್ಲಿ ಕ್ರಮವಾಗಿ ಬಸನಗೌಡ ದದ್ದಲ್ ಮತ್ತು ಬಿ ನಾಗೇಂದ್ರ ಶಾಸಕರಾಗಿದ್ದಾರೆ. ಇವರನ್ನು ಹೊರತುಪಡಿಸಿದರೆ ಕೈ ಪ್ರತಿನಿಧಿಗಳು ಎಲ್ಲಿಯೂ ಇಲ್ಲ.

ಇದರಿಂದಾಗಿ ಕಾಂಗ್ರೆಸೇತರ ಶಾಸಕರು ಇರುವ ಕ್ಷೇತ್ರಗಳಲ್ಲಿ ಪಾದಯಾತ್ರೆ ಸಾಗುವಾಗ ಜನರನ್ನು ಸೇರಿಸುವ ಗುರಿಯನ್ನು ರಾಜ್ಯ ಕಾಂಗ್ರೆಸ್ ನಾಯಕರು ತಿಂಗಳುಗಳ ಮುನ್ನವೇ ತಮ್ಮ ಕೆಲ ಶಾಸಕರು, ಮಾಜಿ ಸಚಿವರಿಗೆ ನೀಡಿದ್ದರು. ಆದರೆ, ಅದರಲ್ಲಿ ಕೆಲವರು ವಿಫಲವಾಗಿದ್ದು, ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ವಿಧದಲ್ಲಿ ಇವರು ಅವಕಾಶ ವಂಚಿತರಾಗಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಭಾರತ್ ಜೋಡೊ ಯಾತ್ರೆ ರಾಜ್ಯದಲ್ಲಿ ಯಶಸ್ಸು; ಉತ್ಸಾಹದಿಂದ ಹೆಜ್ಜೆಹಾಕುತ್ತಿರುವ ನಾಯಕರು

ಗುರಿ ನೀಡಿಲ್ಲ: ಯಾತ್ರೆಗೆ ಹೆಚ್ಚಿನ ಜನರನ್ನು ಕರೆತರುವಂತೆ ಕಾಂಗ್ರೆಸ್ ಶಾಸಕರು, ಮಾಜಿ ಸಚಿವರಿಗೆ ತಿಳಿಸಲಾಗಿದೆಯೇ ಹೊರತು ಇಷ್ಟೇ ಜನರನ್ನು ಸೇರಿಸಬೇಕು, ಇಲ್ಲವಾದರೆ ಅವಕಾಶ ವಂಚಿತರಾಗುತ್ತೀರಿ ಎಂಬ ತಾಕೀತು ಮಾಡಿಲ್ಲ. ಸಹಜವಾಗಿಯೇ ರಾಜ್ಯದಲ್ಲಿ ರಾಷ್ಟ್ರೀಯ ನಾಯಕ ರಾಹುಲ್‍ ಗಾಂಧಿ ಪಾದಯಾತ್ರೆ ನಡೆಸುವಾಗ ಜನರನ್ನು ಸೇರಿಸಿದರೆ ವಿಶ್ವಾಸ ಮೂಡುತ್ತದೆ.

ಅಲ್ಲದೇ, ರಾಜ್ಯದಲ್ಲಿ ಯಾತ್ರೆ ಯಶಸ್ವಿಯಾದರೆ ಅದು ಪ್ರತಿಯೊಬ್ಬ ಕಾಂಗ್ರೆಸ್‍ ನಾಯಕನಿಗೂ ಹೆಮ್ಮೆಯ ವಿಚಾರ. ಹೀಗಾಗಿ, ನಿಮ್ಮ ಬೆಂಬಲಿಗರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪಾಲ್ಗೊಳ್ಳಿ, ಯಾತ್ರೆಯ ಯಶಸ್ಸಿನಲ್ಲಿ ಪಾಲುದಾರರಾಗಿ ಎಂದು ಹೇಳಿದ್ದೆವು. ಕೆಲವರಿಗೆ ಜನರನ್ನು ಸೇರಿಸಲು ಸಾಧ್ಯವಾಗಿಲ್ಲ. ಹಾಗಂತ ಯಾತ್ರೆಯಲ್ಲಿ ಜನರ ಕೊರತೆಯೂ ಆಗಿಲ್ಲ. ರಾಜ್ಯದೆಲ್ಲೆಡೆ ನಮಗೆ ಅತ್ಯಂತ ಉತ್ತಮ ಜನ ಬೆಂಬಲ ಸಿಕ್ಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್. ಧ್ರುವನಾರಾಯಣ ತಿಳಿಸಿದ್ದಾರೆ.

ABOUT THE AUTHOR

...view details