ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಹಿನ್ನೆಲೆ ಭಾರತ ಗೌರವ್ ಕಾಶಿ ದರ್ಶನದಡಿ ಪ್ರವಾಸವನ್ನು ರದ್ದುಪಡಿಸಲಾಗಿದೆ. ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ಮಾಹಿತಿ ನೀಡಿದೆ. ಮಾರ್ಚ್ 24 ರಂದು ನಡೆದ ಸಭೆಯಲ್ಲಿ ಭಾರತ್ ಗೌರವ್ ಕಾಶಿ ದರ್ಶನ ಯೋಜನೆ ಅಡಿಯಲ್ಲಿ ವಾರಣಾಸಿ-ಅಯೋಧ್ಯೆ -ಪ್ರಯಾಗ್‌ರಾಜ್‌ಗೆ ಎಪ್ರಿಲ್-14 ಮತ್ತು ಎಪ್ರಿಲ್-28 ರಂದು ಪ್ರವಾಸ ಹೊರಡಿಸಲು ತೀರ್ಮಾನಿಸಲಾಗಿತ್ತು. ಅದರಂತೆ ಮಾರ್ಚ್-25 ರಿಂದ ಆನ್ ಲೈನ್ ಮೂಲಕ ಸೀಟುಗಳನ್ನು IRCTC ಮೂಲಕ ಕಾಯ್ದಿರಿಸಲು ಪ್ರರಾಂಭಿಸಲಾಗಿತ್ತು.
ಆದರೆ ಮಾರ್ಚ್-29 ರಂದು ಕರ್ನಾಟಕ ವಿಧಾನ ಸಭೆಗೆ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ್ದು, ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿರುತ್ತದೆ. ಆದ್ದರಿಂದ ಈ ಎರಡೂ ದಿನಾಂಕಗಳಂದು ನಿಗದಿಯಾಗಿದ್ದ ಪ್ರವಾಸಗಳಿಗೆ ಅನುಮತಿ ನೀಡಲು ಚುನಾವಣಾ ಆಯೋಗವನ್ನು ಕೋರಲಾಗಿತ್ತು. ಆದರೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿದೆ. ಮಾರ್ಚ್-29 ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ತಕ್ಷಣವೇ ಬುಕ್ಕಿಂಗ್ ವ್ಯವಸ್ಥೆ ತಡೆಹಿಡಿಯಲು ಸೂಚಿಸಿದೆ. ಈ ಪ್ರವಾಸಕ್ಕೆ ಚುನಾವಣಾ ಆಯೋಗದಿಂದ ಅನುಮತಿ ದೊರೆಯದ ಕಾರಣ ಸದರಿ ಪ್ರವಾಸಗಳನ್ನು ರದ್ದುಪಡಿಸಲಾಗಿದೆ ಎಂದು ಧಾರ್ಮಿಕ ದತ್ತಿ ಇಲಾಖೆ ತಿಳಿಸಿದೆ.
ನವೆಂಬರ್ನಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು. ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯ ರಾಮಲಲ್ಲ ದೈವ ಭೂಮಿಯ ವೈಭವ ಸವಿಯುವ ಅವಕಾಶ ಇದಾಗಿದೆ. 8 ದಿನಗಳ ಕಾಲದ ಈ ಟೂರ್ ಪ್ಯಾಕೇಜ್‌ನಲ್ಲಿ ಎಲ್ಲಾ ಸವಲತ್ತುಗಳನ್ನು ಒಳಗೊಂಡಿದೆ. ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್ ವ್ಯವಸ್ಥೆ, ಉಳಿದುಕೊಳ್ಳಲು ಹೋಟೇಲ್, ಮತ್ತು 8 ದಿನಗಳಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆಯನ್ನು ಸಹ ಈ ಪ್ಯಾಕೇಜ್ ಒಳಗೊಂಡಿದೆ.