ಬೆಂಗಳೂರು:ಕೃಷಿ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿ ವಿರೋಧಿಸಿಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ನಾಳೆ ನಗರದ ಕೆಲ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತ ಸಂಘಟನೆಗಳ ನೇತೃತ್ವದಲ್ಲಿ ಎರಡೂವರೆ ಸಾವಿರ ಜನರು ಶೇಷಾದ್ರಿ ರಸ್ತೆಯ ಮೌರ್ಯ ವೃತ್ತದಲ್ಲಿ ಜಮಾವಣೆಗೊಂಡು ಅಲ್ಲಿಂದ ಮೆರವಣಿಗೆಯ ಮುಖಾಂತರ ಫ್ರೀಡಂ ಪಾರ್ಕ್‍ವರೆಗೆ ಸಾಗಿ, ನಂತರ ಅಲ್ಲಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಮೆರವಣಿಗೆ ಸಾಗಲಿದ್ದಾರೆ. ಮೈಸೂರು ಬ್ಯಾಂಕ್ ವೃತ್ತದಲ್ಲಿ ರೈತರು ಜಮಾವಣೆಗೊಂಡು ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸಂಚಾರ ಕೇಂದ್ರ ಉಪ ವಿಭಾಗದ ವ್ಯಾಪ್ತಿಗೆ ಒಳಪಡುವ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿರುವ ಕೆ.ಜಿ.ರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ನೃಪತುಂಗ ರಸ್ತೆಯ ಕೆ.ಆರ್ ವೃತ್ತದಿಂದ ಪೊಲೀಸ್ ಕಾರ್ನರ್ವರೆಗೆ ಮತ್ತು ಪೊಲೀಸ್ ಕಾರ್ನರ್ ವೃತ್ತದಿಂದ ಕೆ.ಆರ್.ವೃತ್ತದವರೆಗೆ ವಾಹನಗಳ ಸಂಚಾರಕ್ಕೆ ಮಾರ್ಪಾಡು ಮಾಡಲಾಗಿದೆ. ಈ ಸಂಚಾರ ಮಾರ್ಪಾಡುಗಳು ಸೋಮವಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಜಾರಿಯಲ್ಲಿರಲಿದೆ.
ಸಂಚಾರ ನಿಷೇಧ:
ಹಲಸೂರು ಗೇಟ್ ಠಾಣೆ ಕಡೆಯಿಂದ ಬಂದು ಪೊಲೀಸ್ ಕಾರ್ನರ್ ಬಳಿ ಎಡ ತಿರುವು ಪಡೆದುಕೊಂಡು ಕೆ.ಜಿ.ರಸ್ತೆ ಕಡೆಗೆ ಸಾಗುವ ಮಾರ್ಗ ಸಂಚಾರ ನಿಷೇಧಿಸಲಾಗಿದೆ. ಹಾಗೆಯೇ ನೃಪತುಂಗ ರಸ್ತೆ ಮೂಲಕ ಬಂದು ಪೊಲೀಸ್ ಕಾರ್ನರ್ ಬಳಿ ಬಲ ತಿರುವು ಪಡೆದು ಕೆ.ಜಿ.ರಸ್ತೆ ಕಡೆಗೆ ಸಾಗುವ ಮಾರ್ಗದಲ್ಲೂ ಸಂಚಾರ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.