ಬೆಂಗಳೂರು:ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್ಗೆ ರಾಜ್ಯದ ರೈತ ಸಂಘಟನೆಗಳೂ ಒಗ್ಗೂಡಿ ಬಂದ್ಗೆ ಬೆಂಬಲಿಸಿದ್ದವು. ಆದರೆ ಕೋವಿಡ್ನಿಂದ ಸಂಕಷ್ಟ ಅನುಭವಿಸಿರುವ ಉದ್ಯಮ, ಅಂಗಡಿ ಮುಂಗಟ್ಟು, ವಾಣಿಜ್ಯ, ಸಾರಿಗೆ ಸಂಸ್ಥೆಗಳು ಬಂದ್ ಮಾಡದೇ ರೈತರ ಪ್ರತಿಭಟನೆಗೆ ನೈತಿಕ ಬೆಂಬಲ ಸೂಚಿಸಿದ್ದವು.
ವಿವಿಧ ಸಂಘಟನೆಗಳು ಸಾಥ್:
ಕಾರ್ಮಿಕ, ದಲಿತ ಸಂಘಟನೆಗಳು, ವಿದ್ಯಾರ್ಥಿ, ಮಹಿಳಾ, ವಕೀಲರ ಸಂಘಟನೆಗಳು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಬೀದಿಗಳಿದು ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವು. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಟೌನ್ ಹಾಲ್‌ನಿಂದ ಮೈಸೂರು ಬ್ಯಾಂಕ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ಬಳಿಕ ಬೆಳಗ್ಗೆ 11 ರಿಂದ 2-30 ರವರೆಗೆ ಪ್ರತಿಭಟನಾ ಸಭೆ ನಡೆಯಿತು.
ಅದಾನಿ, ಅಂಬಾನಿಗೆ ಗುತ್ತಿಗೆ:
ಪ್ರತಿಭಟನಾ ಸಭೆಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಇವತ್ತು ಕರ್ನಾಟಕದಾದ್ಯಂತ ಬಂದ್ ನಡೆಯುತ್ತಿದೆ. ಸರ್ಕಾರ ಹಠಕ್ಕೆ ಬಿದ್ದು ಬಸ್ ಓಡಿಸುತ್ತಿದೆ. ಕೈಗಾರಿಕೆ, ಉದ್ದಿಮೆ, ವಾಣಿಜ್ಯವನ್ನು ಅದಾನಿ, ಅಂಬಾನಿಯವರಿಗೆ ಗುತ್ತಿಗೆ ಕೊಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದೂರಿದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಗುಡುಗು:
ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ರವರು ನಗದೀಕರಣ ಮಾಡುತ್ತಾ ಇದ್ದೇವೆ ಎನ್ನುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯನ್ನು 50-60 ವರ್ಷಗಳು ಕಾಲ ಗುತ್ತಿಗೆ ನೀಡುವುದು, ದೇಶದ ದುಡ್ಡಿನಿಂದ ಉತ್ಪಾದನೆಯಾಗಿರುವ ವಿದ್ಯುಚ್ಛಕ್ತಿಯನ್ನು ಖಾಸಗಿಯವರಿಗೆ ಮಾರಾಟ, ವಿಮಾನ ನಿಲ್ದಾಣ, ಬಂದರುಗಳು ಸೇರಿದಂತೆ ಎಲ್ಲವನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಪೆಟ್ರೋಲ್ ದರ 105 ರೂ, ಇದರಲ್ಲಿ 37 ರೂ ತೆರಿಗೆಯಾಗಿ ನರೇಂದ್ರ ಮೋದಿ ಖಜಾನೆ ಹೋಗುತ್ತಿದೆ. 36 ರೂ. ಬೊಮ್ಮಾಯಿ ಸರ್ಕಾರಕ್ಕೆ ಹೋಗ್ತಾ ಇದೆ. ಹೀಗೆ ಸಾಮಾನ್ಯ ಜನರಿಗೆ ಅನ್ಯಾಯ ಮಾಡುತ್ತಿರುವ ಸರ್ಕಾರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದರು.