ಬೆಂಗಳೂರು: ಭಂಗಿ ಎಂಬುದು ಉತ್ತರ ಭಾರತದ ಶಿವನ ದೇವಸ್ಥಾನಗಳ ಸಮೀಪದಲ್ಲಿ ಬಹುತೇಕ ಜನ ಸೇವಿಸುತ್ತಾರೆ. ಇದೊಂದು ಸಾಂಪ್ರದಾಯಿಕ ಪೇಯವಾಗಿದ್ದು, ನಿಷೇಧಿತ ಪಾನೀಯವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, 29 ಕೆ.ಜಿ ಭಾಂಗ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿ ರೋಷನ್ ಕುಮಾರ್ ಮಿಶ್ರಾ (23) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ. ಮಾದಕ ದ್ರವ್ಯ ಮತ್ತು ಅಮಲು ಪದಾರ್ಥಗಳು (ಎನ್‌ಡಿಪಿಎಸ್) ಕಾಯ್ದೆಯಲ್ಲಿ ಎಲ್ಲಿಯೂ ಭಂಗಿ ಅನ್ನು ನಿಷೇಧಿತ ಮಾದಕ ವಸ್ತು ಅಥವಾ ಪಾನೀಯವೆಂದು ಉಲ್ಲೇಖಿಸಲಾಗಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಭಂಗಿ ನಿಷೇಧಿತ ಪಾನೀಯವಲ್ಲ:ಭಂಗಿಯನ್ನು ಲಸ್ಸಿ ಮಳಿಗೆಗಳಲ್ಲಿ ಇತರ ಪಾನೀಯಗಳಂತೆ ಮಾರಾಟ ಮಾಡಲಾಗುತ್ತಿದೆ. ಲಭ್ಯವಾಗುತ್ತದೆ. ಅಷ್ಟೇ ಅಲ್ಲ, ವಿವಿಧ ಬ್ರಾಂಡೆಡ್ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಭಂಗಿ ಮಾರಾಟ ಮಾಡಲಾಗುತ್ತದೆ. ಹೀಗಿರುವಾಗ, ಅದನ್ನು ಗಾಂಜಾ ಅಥವಾ ಚರಸ್‌ನಿಂದ ತಯಾರಿಸಲಾಗುತ್ತದೆ ಎಂಬುದನ್ನು ಖಚಿತಪಡಿಸುವ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಸಿಗುವವರೆಗೆ ನ್ಯಾಯಾಲಯ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ.
ಅಲ್ಲದೇ, ಆರೋಪಿಯಿಂದ 400 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆದರೆ, ಅದು ಸಣ್ಣ ಪ್ರಮಾಣದಾಗಿದ್ದು, ಜಾಮೀನು ಪಡೆಯಲು ಆತ ಅರ್ಹನಾಗಿದ್ದಾನೆ ಎಂದು ಹೈಕೋರ್ಟ್ ತಿಳಿಸಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.