ಕೆ.ಆರ್.ಪುರ: ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿಯಲ್ಲಿ ಕಿಡಿಗೇಡಿಗಳು ಗಲಭೆ ನಡೆಸಿರುವುದು ಖಂಡನೀಯ, ಗಲಭೆಗೆ ಕಾರಣರಾದ ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಕ್ಷೇತ್ರದ ಬಸವನಪುರ ವಾಡ್೯ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ರಾಜೀವ್ ಗಾಂಧಿ ಆವಾಸ್ ಯೋಜನೆಯಡಿ ನಿರ್ಮಾಣ ಮಾಡಿರುವ ಮನೆಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಂಬಂಧಿ ಸಾಮಾಜಿಕ ಜಾಲತಾಣದಲ್ಲಿ ಪೈಗಂಬರ್ ಬಗ್ಗೆ ಅವಹೇಳನಕಾರಿ ಸಂದೇಶ ರವಾನಿಸಿರುವುದು ತಪ್ಪು. ಮುಸ್ಲಿಂ ಬಾಂಧವರು ತಾಳ್ಮೆಯಿಂದ ಇರಬೇಕಿತ್ತು, ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಕೆಲಸ ಮಾಡಬೇಕು, ಆದರೆ ಮುಸ್ಲಿಂ ಜನತೆ ಕಾನೂನನ್ನು ಕೈಗೆ ತೆಗೆದುಕೊಂಡಿರುವುದು ಖಂಡನೀಯ, ಯಾರೇ ಆಗಲಿ ಕಾನೂನಿನ ವಿರುದ್ಧ ಹೋರಾಡುವುದು ಸರಿಯಲ್ಲ. ಗಲಭೆಗೆ ಕಾರಣರಾದವರು ಯಾರೇ ಆಗಲಿ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.