ಕರ್ನಾಟಕ

karnataka

ETV Bharat / state

ಖಾಸಗಿ ಕಂಪನಿಗಳ ನೌಕರರಿಗೆ ಬಿ ಎಚ್ ಸರಣಿ ನೋಂದಣಿ: ಆದೇಶ ಎತ್ತಿಹಿಡಿದ ಹೈಕೋರ್ಟ್

ಖಾಸಗಿ ಕಂಪನಿಗಳ ನೌಕರರಿಗೆ ಬಿಎಚ್ ಸರಣಿ ನೋಂದಣಿ ಕುರಿತು ಏಕ ಸದಸ್ಯ ಪೀಠ ನೀಡಿದ್ದ ಆದೇಶವನ್ನು ವಿಭಾಗೀಯ ಪೀಠ ಎತ್ತಿ ಹಿಡಿದಿದೆ.

High Court upheld the order  BH Series Registration  BH Series Registration for Employees  Employees of Private Companies  ಖಾಸಗಿ ಕಂಪನಿಗಳ ನೌಕರರಿಗೆ ಬಿಎಚ್ ಸರಣಿ ನೋಂದಣಿ  ಆದೇಶ ಎತ್ತಿಹಿಡಿದ ಹೈಕೋರ್ಟ್  ಏಕ ಸದಸ್ಯ ಪೀಠ ನೀಡಿದ್ದ ಆದೇಶ  ಹೈಕೋರ್ಟ್ ಏಕ ಸದಸ್ಯ ಪೀಠ ನಿರ್ದೇಶಿದ್ದ ಕ್ರಮ  ವಿಭಾಗೀಯ ಪೀಠ ಎತ್ತಿಹಿಡಿದಿದೆ
ಆದೇಶ ಎತ್ತಿಹಿಡಿದ ಹೈಕೋರ್ಟ್

By

Published : Jul 28, 2023, 10:25 PM IST

ಬೆಂಗಳೂರು :ನಗರದ ಎರಡು ಖಾಸಗಿ ಕಂಪನಿಗಳ ನೌಕರರಿಬ್ಬರ ಹೊಸ ಸಾರಿಗೆಯೇತರ ವಾಹನಗಳನ್ನು ಭಾರತ್ (ಬಿಎಚ್) ಸರಣಿಯಡಿ ನೋಂದಣಿ ಮಾಡುವಂತೆ ಸಾರಿಗೆ ಆಯುಕ್ತರಿಗೆ ಹೈಕೋರ್ಟ್ ಏಕ ಸದಸ್ಯ ಪೀಠ ನಿರ್ದೇಶಿದ್ದ ಕ್ರಮವನ್ನು ವಿಭಾಗೀಯ ಪೀಠ ಎತ್ತಿ ಹಿಡಿದಿದೆ. ಖಾಸಗಿ ಕಂಪನಿ ನೌಕರರಿಗೂ ಬಿಎಚ್ ಸರಣಿ ನೋಂದಣಿ ಸಂಖ್ಯೆ ನೀಡುವಂತೆ ನಿರ್ದೇಶನ ನೀಡಿದ್ದ ಏಕ ಸದಸ್ಯ ಪೀಠದ ಆದೇಶವನ್ನು ರಾಜ್ಯ ಸಾರಿಗೆ ಇಲಾಖೆ ದ್ವಿಸದ್ಯ ಪೀಠದಲ್ಲಿ ಪ್ರಶ್ನಿಸಿತ್ತು.

ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್. ಕಮಾಲ್ ಅವರಿದ್ದ ಪೀಠ, ಏಕ ಸದಸ್ಯ ಪೀಠದ ಆದೇಶಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:ಖಾಸಗಿ ವಲಯದ ನೌಕರರ ಸಾರಿಗೇತರ ವಾಹನಗಳಿಗೆ ಬಿಎಚ್ ಸರಣಿ ನೋಂದಣಿ ಮಾಡದಂತೆ ರಾಜ್ಯ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು 2021ರ ಡಿ.20ರಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಎರಡು ಸಾಫ್ಟ್‌ವೇರ್ ಕಂಪನಿಗಳ ಉದ್ಯೋಗಿಗಳಾದ ಟಿ.ಶಾಲಿನಿ ಹಾಗೂ ಕೆ.ಪಿ. ರಂಜಿತ್ ಹೈಕೋರ್ಟ್‌ಗೆ ಪ್ರತ್ಯೇಕ ತಕರಾರು ಅರ್ಜಿ ಸಲ್ಲಿಸಿದ್ದರು.

ಕೇಂದ್ರ ಸರ್ಕಾರ 2021ರ ಆ.26ರಂದು ಹೊರಡಿಸಿರುವ ಅಧಿಸೂಚನೆಯಂತೆ ಅಖಿಲ ಭಾರತ ಸೇವೆಗಳು, ಕೇಂದ್ರ ಸರ್ಕಾರಿ ನೌಕರರು, ಬ್ಯಾಂಕ್ ಅಧಿಕಾರಿಗಳು ಸೇರಿ ಅಂತಾರಾಜ್ಯ ವರ್ಗಾವಣೆ ಹೊಂದಿರುವವರ ವಾಹನಗಳಿಗೆ ಬಿಎಚ್ ಸರಣಿ ನೋಂದಣಿಗೆ ಅವಕಾಶವಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಕಚೇರಿ - ವ್ಯವಹಾರ ಹೊಂದಿರುವ ಖಾಸಗಿ ವಲಯದ ನೌಕರರಿಗೂ ಬಿಎಚ್ ಸರಣಿಯಡಿ ವಾಹನಗಳ ನೋಂದಣಿ ಮಾಡಬೇಕು ಎಂಬುದಾಗಿದೆ. ಆದರೆ, ಬಿಎಚ್ ಸರಣಿಯಡಿ ನೋಂದಣಿಗೆ ಸಾರಿಗೆ ಇಲಾಖೆ ನಿರಾಕರಿಸಿದೆ. ಈ ಸಂಬಂಧ ಸಾರಿಗೆ ಆಯುಕ್ತರು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಹಾಗೂ ತಮ್ಮ ವಾಹನಗಳಿಗೆ ಬಿಎಚ್ ಸರಣಿ ನೋಂದಣಿ ಮಾಡುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರ ಕೋರಿದ್ದರು.

ಅರ್ಜಿಯನ್ನು ಆಕ್ಷೇಪಿಸಿದ್ದ ಸರ್ಕಾರ, ಖಾಸಗಿ ಕಂಪನಿಗಳ ಬಹುತೇಕ ನೌಕರರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಾರೆ. ಜತೆಗೆ, ಅವರು ಆಗಾಗ ಸಂಸ್ಥೆಗಳನ್ನು ಬದಲಿಸುತ್ತಿರುತ್ತಾರೆ. ಇದರಿಂದ, ತೆರಿಗೆ ಅವಧಿ ಮುಗಿದ ನಂತರ ಅವರಿಂದ ತೆರಿಗೆ ಸಂಗ್ರಹಿಸಲು ಮೊದಲಿದ್ದ ಸಂಸ್ಥೆಯಲ್ಲೇ ಇರುತ್ತಾರೆ ಎನ್ನುವುದಕ್ಕೆ ಯಾವುದೇ ಖಾತ್ರಿ ಇಲ್ಲ. ಹೀಗಾಗಿ ಅರ್ಜಿದಾರರ ಮನವಿ ಪುರಸ್ಕರಿಸಬಾರದು ಎಂದು ನ್ಯಾಯಾಲಯವನ್ನು ಕೋರಲಾಗಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಖಾಸಗಿ ಕಂಪನಿ ನೌಕರರ ಅರ್ಜಿಯನ್ನು 2022ರ ಡಿ.16ರಂದು ಮಾನ್ಯ ಮಾಡಿದ್ದ ಏಕಸದಸ್ಯ ಪೀಠ, 2021ರ ಡಿ.20ರಂದು ಸಾರಿಗೆ ಆಯುಕ್ತರು ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿತ್ತು.

ಅಲ್ಲದೆ, ಕೇಂದ್ರ ಸರ್ಕಾರಿ ನೌಕರರು ಸೇರಿ ಕೆಲ ವರ್ಗದ ಸಿಬ್ಬಂದಿಗೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾರಿಗೇತರ ವಾಹನಗಳ ಸುಗಮ ಸಂಚಾರಕ್ಕೆ ಬಿಎಚ್ ಸರಣಿಯಡಿ ನೋಂದಣಿಗೆ ಅವಕಾಶ ಕಲ್ಪಿಸಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2021ರ ಆ.26ರಂದು ತಿದ್ದುಪಡಿ ನಿಯಮಗಳ ಅಧಿಸೂಚನೆ ಹೊರಡಿಸಿದೆ. ಇದು ಬೇರೆ ರಾಜ್ಯಗಳಿಗೆ ವರ್ಗಾವಣೆಯಾಗುವ ಖಾಸಗಿ ವಲಯದ ಕಂಪನಿಗಳ ಸಿಬ್ಬಂದಿಗೂ ಅನ್ವಯಿಸಲಿದೆ. ಆದ್ದರಿಂದ, ಸಾರಿಗೆ ಆಯುಕ್ತರು ಅರ್ಜಿದಾರರ ಸಾರಿಗೇತರ ವಾಹನಗಳನ್ನು ಕೇಂದ್ರದ ಅಧಿಸೂಚನೆಯಂತೆ ಬಿಎಚ್ ಸರಣಿಯಡಿ ನೋಂದಣಿ ಮಾಡಬೇಕು. ಜತೆಗೆ, ಕೇಂದ್ರ ಮೋಟಾರು ವಾಹನಗಳ (20ನೇ ತಿದ್ದುಪಡಿ) ನಿಯಮ-2021 ಅನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು ಎಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಓದಿ:ಅಂತರ್‌ರಾಜ್ಯ ವಾಹನ ನೋಂದಣಿ ಕಿರಿಕಿರಿಗೆ ಕಡಿವಾಣ​ ಹಾಕಲಿದೆ 'ಬಿಹೆಚ್ ಸರಣಿ'

ABOUT THE AUTHOR

...view details