ಬೆಂಗಳೂರು: ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದ ಮೇಲೆ ಬೆಟ್ಟಿಂಗ್ ಆಡಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಸಾಕೇತ್ ಹಾಗೂ ರಿಷಭ್ ಬಂಧಿತ ಆರೋಪಿಗಳು.
ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪೇಗೌಡ ರಸ್ತೆಯಲ್ಲಿರುವ ಸೆಂಚುರಿ ಇಂಡಸ್ ಅಪಾರ್ಟ್‌ಮೆಂಟಿನಲ್ಲಿದ್ದ ಆರೋಪಿಗಳು, ವಿವಿಧ ಬೆಟ್ಟಿಂಗ್ ವೆಬ್‌ಸೈಟ್‌ಗಳಲ್ಲಿ ಖಾತೆ ತೆರೆದು ಅದರ ಐಡಿ ಹಾಗೂ ಪಾಸ್ವರ್ಡ್ಗಳನ್ನು ಆಡುವವರಿಗೆ ನೀಡುತ್ತಿದ್ದರು. ಅವರಿಂದ ಬೆಟ್ಟಿಂಗ್ ಆಡಿಸುತ್ತಿದ್ದರು. ಆರೋಪಿಗಳ ಕೃತ್ಯದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿಯ ವಿಶೇಷ ವಿಚಾರಣ ದಳದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 65 ಲಕ್ಷ ಮೌಲ್ಯದ 10 ಚಿನ್ನದ ಬಿಸ್ಕೆಟ್, 3 ಲ್ಯಾಪ್‌ಟಾಪ್, 1 ಟ್ಯಾಬ್, 3 ಮೊಬೈಲ್ ಫೋನ್ ಹಾಗೂ 2,341 ರೂ. ನಗದು ಹಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ,"ಖಚಿತ ಮಾಹಿತಿಯ ಮೇರೆಗೆ ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್ ಮೇಲೆ ದಾಳಿ ಮಾಡಿದಾಗ ಲ್ಯಾಪ್‌ಟಾಪ್, ಮೊಬೈಲ್ನಲ್ಲಿ ಅನಧಿಕೃತ ಬೆಟ್ಟಿಂಗ್ ಆ್ಯಪ್ಗಳನ್ನು ಬಳಸಿಕೊಂಡು ಆನ್ಲೈನ್ನಲ್ಲಿ ಆಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಅಲ್ಲಿ ಸಿಕ್ಕಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಹಣ ಆನ್ಲೈನಲ್ಲಿ ವ್ಯವಹಾರ ಆಗಿರುವುದರಿಂದ ಅವುಗಳ ಬಗ್ಗೆ ಮತ್ತು ದೊರೆತಿರುವ ಚಿನ್ನದ ಬಿಸ್ಕೇಟ್ಗಳ ಬಗ್ಗೆಯೂ ತನಿಖೆ ಮಾಡುತ್ತೇವೆ. ಚಿನ್ನದ ಖರೀದಿಯ ಬಗ್ಗೆ ಯಾವುದೇ ದಾಖಲಾತಿ ಕೊಟ್ಟಿಲ್ಲ. ಹೀಗಾಗಿ ತನಿಖೆ ಮಾಡುತ್ತಿದ್ದೇವೆ" ಎಂದಿದ್ದಾರೆ.