ಬೆಂಗಳೂರು: ಬೆಂಗಳೂರಿಗೆ ಹಿಂದಿನ ವೈಭವ ಮರಳಿಸುವ ನಿಟ್ಟಿನಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯು ಬೆಟರ್ ಬೆಂಗಳೂರು ಕ್ರಿಯಾ ಸಮಿತಿ ರಚಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೂತನ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.
ಈ ವಿಚಾರವನ್ನು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಡಿಕೆಶಿ, ಈ ಹಿಂದೆ ಹೇಳಿದಂತೆ ನಮ್ಮ ಬೆಂಗಳೂರಿನ ಹಿರಿಮೆ ಮರಳಿ ಪಡೆಯುವ ನಿಟ್ಟಿನಲ್ಲಿ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ 'ಬೆಟರ್ ಬೆಂಗಳೂರು' ಎನ್ನುವ ಕ್ರಿಯಾ ಸಮಿತಿ ರಚಿಸಿದ್ದೇವೆ. ಈ ಸಮಿತಿಯು 20 ದಿನಗಳೊಳಗೆ ವರದಿಯನ್ನು ನೀಡಲಿದೆ. ಈ ವರದಿ ಆಧಾರದ ಮೇಲೆ ಅಧಿಕಾರಕ್ಕೆ ಬಂದ ತಕ್ಷಣ ಕಾರ್ಯಗತಗೊಳ್ಳುವ ದೂರದೃಷ್ಟಿಯ ಯೋಜನೆ ರೂಪಿಸುತ್ತೇವೆ ಎಂದಿದ್ದಾರೆ.
ಬೆಂಗಳೂರು ಅಭಿವೃದ್ಧಿಗೆ ಕಾಂಗ್ರೆಸ್ ಸಮಿತಿ :ಬೆಟರ್ ಬೆಂಗಳೂರು ಕ್ರಿಯಾ ಸಮಿತಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ಅಧ್ಯಕ್ಷರಾಗಿದ್ದು, ಇವರನ್ನು ಸೇರಿದಂತೆ ಒಟ್ಟು 9 ಮಂದಿಯ ತಂಡವನ್ನು ರಚಿಸಲಾಗಿದೆ. ಸಮಿತಿಯಲ್ಲಿ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಸಚಿವರಾದ ಕೆಜೆ ಜಾರ್ಜ್, ಕೃಷ್ಣ ಬೈರೇಗೌಡ, ಶಾಸಕರಾದ ಎನ್ ಎ ಹ್ಯಾರಿಸ್, ರಿಜ್ವಾನ್ ಅರ್ಷದ್, ಮಾಜಿ ಮೇಯರ್ ಪದ್ಮಾವತಿ, ಗಂಗಾಂಬಿಕೆ ಸದಸ್ಯರಾಗಿದ್ದಾರೆ. ರಾಜ್ಯಸಭೆ ಮಾಜಿ ಸದಸ್ಯ ರಾಜೀವ್ ಗೌಡ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಮುಂಬರುವ ದಿನಗಳಲ್ಲಿ ಬೆಂಗಳೂರು ನಗರವನ್ನು ಯಾವ ರೀತಿಯಲ್ಲಿ ಸುಸ್ಥಿತಿ ತರುವುದು ಮತ್ತು ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಯಾವ ರೀತಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಬಹುದು ಎಂಬ ಕುರಿತು ಸಮಿತಿಯು ಒಂದು ವರದಿಯನ್ನು ಸಿದ್ಧಪಡಿಸಿ ಪಕ್ಷದ ಅಧ್ಯಕ್ಷರಿಗೆ ನೀಡಲಿದೆ. ಇದನ್ನು ಆಧಾರವಾಗಿಟ್ಟುಕೊಂಡು ಮುಂಬರುವ ಬಿಬಿಎಂಪಿ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ನಗರವನ್ನು ಹೇಗೆ ಕೇಂದ್ರೀಕರಿಸಬೇಕು ಎಂಬ ಕುರಿತು ಪಕ್ಷದ ರಾಜ್ಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ.
(ಇದನ್ನೂ ಓದಿ: ಮದುವೆ ಬಗ್ಗೆ ಮಹಿಳೆಯೊಬ್ಬರ ಮಾತುಗಳಿಂದ ರಾಹುಲ್ ಗಾಂಧಿ ಖುಷ್: ಜೈರಾಮ್ ರಮೇಶ್ ಟ್ವೀಟ್)