ಬೆಂಗಳೂರು:ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರಿ ಮಳೆ ಮತ್ತು ನೆರೆ ಹಾವಳಿಯಿಂದಾಗಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯಲ್ಲಿ ಹಾನಿಗೊಳಗಾದ ವಿದ್ಯುತ್ ಮೂಲಭೂತ ಸೌಲಭ್ಯಗಳನ್ನು ತುರ್ತಾಗಿ ಸರಿಪಡಿಸಿ, ವಿದ್ಯುತ್ ಸಂಪರ್ಕವನ್ನು ಮರುಕಲ್ಪಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಬೆಸ್ಕಾಂ) ಮುಂದಾಗಿದೆ.
ನೆರೆಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಮರುಕಲ್ಪಿಸಲು ಹೆಸ್ಕಾಂಗೆ ಬೆಸ್ಕಾಂ ಸಾಥ್
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ ಭಾರಿ ಮಳೆ ಮತ್ತು ನೆರೆ ಹಾವಳಿಯಿಂದಾಗಿ ಹಾನಿಗೊಳಗಾದ ವಿದ್ಯುತ್ ಮೂಲಭೂತ ಸೌಲಭ್ಯಗಳನ್ನು ಸರಿಪಡಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಹುಬ್ಬಳ್ಳಿಗೆ ತೆರಳಿದೆ.
ಈ ನಿಟ್ಟಿನಲ್ಲಿ 4 ಇಂಜಿನಿಯರುಗಳು ಮತ್ತು 50 ಪವರ್‌ಮೆನ್‌ಗಳ ತಂಡ ಹುಬ್ಬಳ್ಳಿಗೆ ತೆರಳಿದೆ. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಹಾನಿಗೊಳಗಾದ ವಿದ್ಯುತ್ ಕಂಬಗಳು, ತಂತಿಗಳು ಮತ್ತು ಪರಿವರ್ತಕಗಳನ್ನು ತ್ವರಿತವಾಗಿ ದುರಸ್ತಿಗೊಳಿಸಿ ವಿದ್ಯುತ್ ಸರಬರಾಜನ್ನು ಮರುಕಲ್ಪಿಸುವ ಕಾರ್ಯದಲ್ಲಿ ಬೆಸ್ಕಾಂ ಪಡೆ ಕಾರ್ಯನಿರ್ವಹಿಸಲಿದೆ.
ಹೆಸ್ಕಾಂ ಸಂಸ್ಥೆಯ ಕೋರಿಕೆಗೆ ಸ್ಪಂದಿಸಿ ಕಳುಹಿಸಲಾಗಿರುವ ಬೆಸ್ಕಾಂ ತಂಡವು ಮುಂದಿನ ಎರಡು ವಾರಗಳ ಕಾಲ ವಿದ್ಯುತ್ ಮೂಲಸೌಲಭ್ಯಗಳ ದುರಸ್ತಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯದಲ್ಲಿ ತೊಡಗಲಿದೆ.