ಬೆಂಗಳೂರು: ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂ ಜಾಗೃತ ದಳ ಕಳೆದ 4 ತಿಂಗಳಲ್ಲಿ 10,908 ವಿದ್ಯುತ್ ಸ್ಥಾವರಗಳ ತಪಾಸಣೆ ಮಾಡಿ ತಪ್ಪಿತಸ್ಥ ಗ್ರಾಹಕರಿಗೆ 2.59 ಕೋಟಿ ರೂಪಾಯಿ ದಂಡ ವಿಧಿಸಿದೆ. ಸೆಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳವರೆಗೆ ಒಟ್ಟು 1781 ಪ್ರಕರಣಗಳನ್ನು ಜಾಗೃತ ದಳ ದಾಖಲಿಸಿಕೊಂಡು ಅದರಲ್ಲಿ 1721 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಅದೇ ರೀತಿ ಬಾಕಿ ವಿದ್ಯುತ್ ಬಿಲ್ ವಸೂಲಿಗೆ ಬೆಸ್ಕಾಂ ಕ್ರಮಗೊಂಡಿದ್ದು, ಕಳೆದ 3 ತಿಂಗಳಲ್ಲಿ ಬಾಕಿ ಇದ್ದ 1417.45 ಕೋಟಿ ರೂಪಾಯಿ ನಲ್ಲಿ 358.3 ಕೋಟಿ ರೂಪಾಯಿ ಬಿಲ್ ಮೊತ್ತವನ್ನು ಸಂಗ್ರಹಿಸಿದೆ. ಬಿಲ್ ಪಾವತಿಸದ ಸುಮಾರು 23 ಲಕ್ಷ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
2373 ವಿದ್ಯುತ್ ಮೀಟರ್ ಗಳ ಪರಿಶೀಲನೆ: ಬೆಸ್ಕಾಂ ನ ಮಾಪಕ ವಿಭಾಗದ ಸಿಬ್ಬಂದಿ ಸೆಪ್ಟೆಂಬರ್ ನಿಂದ ನವೆಂಬರ್ ತಿಂಗಳವರೆಗೆ 2,373 ವಿದ್ಯುತ್ ಮೀಟರ್ ಗಳನ್ನು ಪರಿಶೀಲನೆ ಮಾಡಿದ್ದು, ಜಕಾತಿ ದುರ್ಬಳಕೆ, ಅಧಿಕ ಲೋಡ್ ಮುಂತಾದ ಪ್ರಕರಣಗಳಲ್ಲಿ ಸುಮಾರು 7 ಕೋಟಿ ರೂ. ದಂಡ ವಿಧಿಸಿ 5 ಕೋಟಿ ರೂಪಾಯಿ ಗಳನ್ನು ಸಂಗ್ರಹಿಸಿದ್ದರೆ ಎಂದು ತಿಳಿಸಿದ್ದಾರೆ.
4,784 ವಿದ್ಯುತ್ ದುರುಪಯೋಗ ಪ್ರಕರಣ:ಬೆಸ್ಕಾಂನ ಕ್ಷೇತ್ರ ಸಿಬ್ಬಂದಿಗಳು 4,784 ವಿದ್ಯುತ್ ದುರುಪಯೋಗ ಪ್ರಕರಣಗಳನ್ನು ದಾಖಲಿಸಿಕೊಂಡು ತಪ್ಪಿತಸ್ಥರಿಗೆ 6.5 ಕೋಟಿ ರೂಪಾಯಿ ದಂಡ ವಿಧಿಸುವುದರೊಂದಿಗೆ 3.9 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
11 ಜಾಗೃತ ದಳದ ಠಾಣೆಗಳು ಕಾರ್ಯಾಚರಣೆಗೆ: ಬೆಸ್ಕಾಂ ಕಾರ್ಯವ್ಯಾಪ್ತಿಯ ರಾಜಾಜಿನಗರ, ಜಯನಗರ, ಇಂದಿರಾನಗರ, ಮಲ್ಲೇಶ್ವರ, ಹೊಸಕೋಟೆ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ಚಿತ್ರದುರ್ಗ ಸೇರಿದಂತೆ ಒಟ್ಟು 11 ಜಾಗೃತ ದಳ ಠಾಣೆಗಳಲ್ಲಿ 11 ಇನ್ಸ್ಪೆಕ್ಟರ್ ಹಾಗೂ ಸಬ್-ಇನ್ಸ್ಪೆಕ್ಟರ್ಗಳೊಂದಿಗೆ ಪೊಲೀಸ್ ಸೂಪರಿಂಟೆಡೆಂಟ್ ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ಗಳ ನೇತೃತ್ವದಲ್ಲಿ ಜಾಗೃತ ದಳ ಕಾರ್ಯನಿರ್ವಹಣೆ ಮಾಡಿದೆ ಎಂದು ಮಹಾಂತೇಶ ಬೀಳಗಿ ಹೇಳಿದ್ದಾರೆ.
ಇದನ್ನೂ ಓದಿ:ಸ್ಯಾಂಟ್ರೊ ರವಿಗೆ ಜನವರಿ 25ರ ವರೆಗೆ ನ್ಯಾಯಾಂಗ ಬಂಧನ
ವ್ಯಕ್ತಿಯನ್ನು ಅಡ್ಡಗಟ್ಟಿ ಹಣಕ್ಕೆ ಬೇಡಿಯಿಟ್ಟಿದ್ದ ಆರೋಪದಲ್ಲಿ ಇಬ್ಬರು ಕಾನ್ಸ್‌ಟೇಬಲ್ ಅಮಾನತು: ಬೆಂಗಳೂರಿನಲ್ಲಿನೈಟ್ ಶಿಫ್ಟ್ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಹಣಕ್ಕೆ ಬೇಡಿಯಿಟ್ಟಿದ್ದ ಆರೋಪದಲ್ಲಿ ಇಬ್ಬರು ಕಾನ್ಸ್ಟೇಬಲ್ಗಳನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಬಂಡೇಪಾಳ್ಯ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮಲ್ಲೇಶ್ ಹಾಗೂ ಕೀರ್ತಿ ಕುಮಾರ್ ಅವರನ್ನು ಅಮಾನತುಗೊಳಿಸಿ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಆದೇಶಿಸಿದ್ದರು. ಹಿಮಾಚಲ ಪ್ರದೇಶ ಮೂಲದ ಪಾಟೀಲ್ ಎಂಬಾತ ಟ್ವಿಟರ್ ಮೂಲಕ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಪಿ ಸಿ.ಕೆ ಬಾಬಾ ಪ್ರಕರಣದ ಕುರಿತು ತನಿಖೆ ನಡೆಸಿ ಈ ಆದೇಶ ಹೊರಡಿಸಿದ್ದರು.
ಘಟನೆಯ ಹಿನ್ನೆಲೆ:ಜನವರಿ 11ರಂದು ಬೆಳಗ್ಗಿನ ಜಾವ 3:50ರ ಸುಮಾರಿಗೆ ರಾತ್ರಿ ಪಾಳಿ ಮುಗಿಸಿ ಬರುತ್ತಿದ್ದಾಗ ಹೆಚ್ಎಸ್ಆರ್ ಲೇಔಟ್ ಬಳಿ ತನ್ನನ್ನ ಅಡ್ಡಗಟ್ಟಿದ ಇಬ್ಬರು ಕಾನ್ಸ್ಟೇಬಲ್ಗಳು ಪರಿಶೀಲನೆ ಮಾಡುವ ನೆಪದಲ್ಲಿ 5 ಸಾವಿರ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದರು. ಹಣ ನೀಡದ ಕಾರಣ ಬಲವಂತವಾಗಿ ನನ್ನ ಬ್ಯಾಗ್ನಲ್ಲಿ ಗಾಂಜಾ ಇಟ್ಟು ಬೆದರಿಸಿದ್ದರು. ಕೊನೆಗೆ 2 ಸಾವಿರ ರೂ., ಹಣ ತೆಗೆದುಕೊಂಡು ಬಿಟ್ಟು ಕಳುಹಿಸಿದ್ದರು ಎಂದು ವೈಭವ್ ಪಾಟೀಲ್ ಟ್ವಿಟರ್ ಮೂಲಕ ದೂರು ನೀಡಿದ್ದರು.