ಬೆಂಗಳೂರು/ತುಮಕೂರು: ಭಾರೀ ಮಳೆಗೆ ವಿದ್ಯುತ್ ಪೂರೈಕೆ ಕಡಿತಗೊಂಡ ಕಂಬದ ವಿದ್ಯುತ್ ಸಂಪರ್ಕ ಕಲ್ಪಸಲು ತೆರಳಿದ ಬೆಸ್ಕಾಂನ ಲೈನ್ಮನ್ ಮಹೇಶ್ ಗೌಡರ (38) ಗುಬ್ಬಿ ತಾಲೂಕಿನ ತಿಪ್ಪೂರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಮೊನ್ನೆ ಸೆ.10 ರಂದು ಸುರಿದ ಭಾರೀ ಮಳೆಗೆ ಗುಬ್ಬಿ ತಾಲೂಕಿನ ಹಲವೆಡೆ ಕರೆಂಟ್ ವ್ಯತ್ಯವಾಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಪೂರೈಕೆ ಸರಿಪಡಿಸಲು ತೆರಳಿದ ಮಹೇಶ ಗೌಡರ ಕೆರೆಯಲ್ಲು ಈಜುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಗುಬ್ಬಿ ಉಪ ವಿಭಾಗದ ಬಿದರೆ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುವ F6 ಜೇನಿಗರಹಳ್ಳಿ ವಿದ್ಯುತ್ ಮಾರ್ಗದ ದುರಸ್ತಿಗೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಕೆರೆಯ ಮಧ್ಯದಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬದ ವಿದ್ಯುತ್ ಸಂಪರ್ಕ ಮರು ಜೋಡಿಸಲು ಮಹೇಶ್ ಗೌಡರ ಕರೆಯಲ್ಲಿ ಈಜಿಕೊಂಡು ಹೋಗಿದ್ದರು. ಜತೆಯಲ್ಲಿದ್ದ ಸಿಬ್ಬಂದಿ ಎಚ್ಚರಿಸಿದ್ದರೂ ಕೂಡ ಈಜಲು ಮುಂದಾದರು. ವಿದ್ಯುತ್ ಕಂಬದಿಂದ ಸುಮಾರು 15 ಅಡಿ ದೂರದಲ್ಲಿ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿ ಸಹಾಯದಿಂದ ಮೃತದೇಹವನ್ನು ಹೊರ ತೆಗೆಯಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಮರುದಿನ ಮೃತ ದೇಹವನ್ನು ಹೊರತೆಗೆಯಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಸೋಮವಾರ ಬಾಗಲಕೋಟದಲ್ಲಿ ಮಹೇಶ್ ಗೌಡರ ಅಂತ್ಯ ಸಂಸ್ಕಾರ ಸಹ ನೆರವೇರಿಸಲಾಗಿದೆ.