ಬೆಂಗಳೂರು: ವೈಟ್ ಫೀಲ್ಡ್ ರಸ್ತೆಯ ಸಿದ್ದಾಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವತಿಯೊಬ್ಬಳು ಸಾವಿಗೀಡಾಗಿರುವುದಕ್ಕೆ ಜಿ.ಎಸ್.ಮಿಡಿಯಾ ಜಾಹೀರಾತು ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದು ಬೆಸ್ಕಾಂನ ಗುಣಮಟ್ಟ, ಪ್ರಮಾಣಿತ ಸುರಕ್ಷತೆ ನಿಗಮ ವರದಿ ನೀಡಿದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಘಟನೆಯ ಬಗ್ಗೆ ವರದಿ ನೀಡಿದ್ದು, ಈ ಸಾವಿಗೆ ಬೆಸ್ಕಾಂ ಜವಾಬ್ದಾರರಲ್ಲ. ಘಟನೆಗೆ ಜಿ ಎಸ್ ಮೀಡಿಯಾ ಸಂಸ್ಥೆಯವರೇ ಸಂಪೂರ್ಣ ಜವಾಬ್ದಾರರು. ಮೃತರ ಕುಟುಂಬಕ್ಕೆ ಆ ಸಂಸ್ಥೆಯೇ ಸೂಕ್ತ ಪರಿಹಾರ ನೀಡಬೇಕು. ಬೆಸ್ಕಾಂ ವತಿಯಿಂದ ಯಾವುದೇ ರೀತಿಯ ಪರಿಹಾರ ನೀಡಲು ಅವಕಾಶವಿಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ಸೋಮವಾರ ಸುರಿದ ಭಾರಿ ಮಳೆಗೆ ಅವಘಡ ನಡೆದ ರಸ್ತೆಯಲ್ಲಿ ನೀರು ತುಂಬಿತ್ತು. ರಾತ್ರಿ ಸುಮಾರು 8:10ರ ವೇಳೆಗೆ ಅಖಿಲಾ ಎಂಬ ಯುವತಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗ ಆಯತಪ್ಪಿ ರಸ್ತೆಯ ವಿಭಜಕದ ಮೇಲೆ ಅಳವಡಿಸಿದ್ದ ಜಿ ಎಸ್ ಮೀಡಿಯಾಗೆ ಸೇರಿದ ಜಾಹೀರಾತು ಫಲಕದ ಮೇಲೆ ಬಿದ್ದಿದ್ದರು. ಈ ಸಂದರ್ಭದಲ್ಲಿ ಅದರಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ಸ್ಪರ್ಶಿಸಿ ಸಾವಿಗೀಡಾಗಿದ್ದರು.
ಈ ಘಟನೆಯ ಸಂಬಂಧ ಬೆಸ್ಕಾಂ ಸಹಾಯಕ ಇಂಜಿನಿಯರ್ ಘಟನಾ ಸ್ಥಳದಲ್ಲಿ ಪರಿಶೀಲಿಸಿದಾಗ ಜಾಹೀರಾತು ಫಲಕ ಜಿ ಎಸ್ ಮೀಡಿಯಾ ಎಂಬ ಸಂಸ್ಥೆಗೆ ಸೇರಿರುವುದು ಪತ್ತೆಯಾಗಿದೆ. ಇದಕ್ಕೆ ಅಳವಡಿಸಲಾಗಿದ್ದ ವಿದ್ಯುತ್ ಕೇಬಲಿನ ವಿದ್ಯುತ್ ನಿರೋಧಕ ಕವಚ ಜಾಹೀರಾತು ಫಲಕದ ಜಂಕ್ಷನ್ ಬಾಕ್ಸ್ ಬಳಿ ಸುಲಿದು (Skin out) ಕೊಂಡಿದೆ. ಒಳಗಿದ್ದ ವಿದ್ಯುತ್ ತಂತಿಯು ಲೋಹದ ಜಂಕ್ಷನ್ ಬಾಕ್ಸ್ಗೆ ತಗುಲಿಕೊಂಡು ವಿದ್ಯುತ್ ಪ್ರವಹಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಯಾವುದೇ ಸ್ಥಾವರಕ್ಕೆ ವಿದ್ಯುತ್ ಸರಬರಾಜು ಮಾಡುವ ಕೆಲಸ ಮಾತ್ರ ಬೆಸ್ಕಾಂಗಿದೆ. ವೈರಿಂಗ್ ವ್ಯವಸ್ಥೆಯ ವ್ಯಾಪ್ತಿಯು ಸಂಬಂಧಿತ ಗ್ರಾಹಕ ಸಂಸ್ಥೆಗೆ ಸೇರಿದ್ದಾಗಿದೆ. ಆದ್ದರಿಂದ ಜಿ ಎಸ್ ಮೀಡಿಯಾ ಸಂಸ್ಥೆಯವರು ತಮ್ಮ ವ್ಯಾಪ್ತಿಗೆ ಬರುವ ವೈರಿಂಗ್ ವ್ಯವಸ್ಥೆ ಮತ್ತು ಸಂಬಂಧಪಟ್ಟ ಜಂಕ್ಷನ್ ಬಾಕ್ಸ್‌ನಲ್ಲಿ ಕೇಬಲ್‌ನಲ್ಲಿನ ವಿದ್ಯುತ್ ನಿರೋಧಕ ಕವಚವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿದ್ದರೆ ಅವಘಡ ಸಂಭವಿಸುತ್ತಿರಲಿಲ್ಲ ಎಂದು ವರದಿ ಮೂಲಕ ತಿಳಿಸಿದೆ.
ಇದನ್ನೂ ಓದಿ:ಸ್ಕೂಟಿ ಸ್ಕಿಡ್ ಆಗಿದ್ದಕ್ಕೆ ಕರೆಂಟ್ ಕಂಬ ಹಿಡಿದ ಯುವತಿ ದಾರುಣ ಸಾವು: ಬೆಸ್ಕಾಂ ವಿರುದ್ಧ ಆಕ್ರೋಶ