ಬೆಂಗಳೂರು:ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶ ಲಾಕ್‌ಡೌನ್ ಆಗಿದೆ. ಇದರಿಂದ ಜನರಿಗೆ ಒಂದಷ್ಟು ಅನಾನುಕೂಲವಾಗಿದೆ. ಹಾಗಂತ ಉಪಯೋಗ ಆಗಿಲ್ಲ ಎಂದಲ್ಲ. ಈ ಲಾಕ್‌ಡೌನ್ ಪ್ರಕೃತಿಗೆ ವರವಾಗಿ ಪರಿಣಮಿಸಿದೆ.
ಹೌದು, ಕಾರ್ಖಾನೆಗಳು ಸ್ತಬ್ಧವಾದ ಹಿನ್ನೆಲೆಯಲ್ಲಿ ವಾಯುಮಾಲಿನ್ಯ ಕಡಿಮೆ ಆಗಿದೆ. ಅದರ ಜೊತಗೆ ನೀರಿನ ಬಳಕೆ ಕಡಿಮೆಯಾಗಿ ಅಂತರ್ಜಲ ಮಟ್ಟವೂ ವೃದ್ಧಿಸಿದೆ. ಇದರ ಜೊತೆಗೆ ವಿದ್ಯುತ್ ಬಳಕೆ ಪ್ರಮಾಣವೂ ಕಡಿಮೆ ಆಗಿದೆ. ಇದರಿಂದ ಈ ಬೇಸಿಗೆಯಲ್ಲಿ ಈ ಬಾರಿ ರಾಜ್ಯದಲ್ಲಿ ವಿದ್ಯುತ್ ಅಭಾವ ತಲೆದೋರದು. ಜೊತೆಗೆ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಹಾಗೂ ರೈತರಿಗೆ ಅಗತ್ಯ ವಿದ್ಯುತ್ ಪೂರೈಕೆಯಾಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ ಈಟಿವಿ ಭಾರತಗೆ ತಿಳಿಸಿದ್ದಾರೆ.
ಮಾಹಿತಿ ನೀಡಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ ಲಾಕ್ಡೌನ್ನಿಂದ ಬೆಸ್ಕಾಂಗೆ ಆದ ಲಾಭ, ನಷ್ಟದ ಬಗ್ಗೆ ಮಾತನಾಡಿದ ಅವರು, ಜನರು ಮನೆಯಲ್ಲಿರುವ ಕಾರಣ ಗೃಹ ಬಳಕೆ ವಿದ್ಯುತ್ ಬಳಕೆಯಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಳವಾಗಿದೆ. ಆದರೆ ಕಾರ್ಖಾನೆಗಳು, ಸಿನಿಮಾ ಮಂದಿಗಳು, ಮಾಲ್ಗಳು ಬಂದ್ ಆಗಿದ್ದ ಕಾರಣ ಸಾಕಷ್ಟು ವಿದ್ಯುತ್ ಉಳಿತಾಯ ಆಗಿದೆ.
ಇದರ ನಡುವೆ ವಾಣಿಜ್ಯ ವಿದ್ಯುತ್ ಬೇಡಿಕೆ ಕಡಿಮೆ ಆಗಿದೆ. ರೈತರಿಗೆ ನೀಡುವ ವಿದ್ಯುತ್ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಲಾಕ್‌ಡೌನ್ ಇದ್ದರು ರೈತರ ಪಂಪ್ಸೆಟ್ಗಳು ಬಳಕೆಯಾಗ್ತಿದೆ. ಸರ್ಕಾರದ ಆದೇಶದಂತೆ ನಾವು ಕೂಡ ರೈತರಿಗೆ ವಿದ್ಯುತ್ ಪೂರೈಕೆ ಮಾಡ್ತಿದ್ದೇವೆ. ನಮ್ಮ ಬಳಿ ಸಾಕಷ್ಟು ವಿದ್ಯುತ್ ಸ್ಟಾಕ್ ಇದೆ. ಆದ್ದರಿಂದ ಲೋಡ್ ಶೆಡ್ಡಿಂಗ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದ್ದಾರೆ.
ಆದರೀಗ ಲಾಕ್ಡೌನ್ನಿಂದ ಬೆಸ್ಕಾಂಗೆ ವಿದ್ಯುತ್ ಉಳಿತಾಯದ ಜೊತೆ ನಷ್ಟವೂ ಆಗಿದೆ. ಲಾಕ್‌ಡೌನ್ ಇರುವ ಕಾರಣ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ನಮ್ಮ ರಾಜ್ಯ ಪವನ ಶಕ್ತಿ ಹಾಗೂ ಸೌರ ಶಕ್ತಿಯಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಮಾಡಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡ್ತಿದ್ದರಿಂದ ಶೇ. 20ರಷ್ಟು ವಿದ್ಯುತ್ ಬೇಡಿಕೆ ಕಡಿಮೆ ಆಗಿದೆ. ಹಾಗಾಗಿ ಬೆಸ್ಕಾಂಗೆ ನಷ್ಟ ಆಗಿದೆ. ಇದರ ಜೊತೆಗೆ ಸರ್ಕಾರ ಕೂಡ ಕಾರ್ಖಾನೆಗಳ ಬಿಲ್ಗಳ ಮನ್ನಾ ಮಾಡಿರುವುದರಿಂದ ಬೆಸ್ಕಾಂಗೆ ಅರ್ಥಿಕವಾಗಿ ಹೊರೆಯಾಗಿದೆ ಎಂದು ಬೆಸ್ಕಾ ಎಂಡಿ ಮಾಹಿತಿ ನೀಡಿದ್ದಾರೆ.