ಕರ್ನಾಟಕ

karnataka

ETV Bharat / state

ಕೆರೆಯಲ್ಲಿ ಅಭ್ಯಾಸ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೇಟೆ.. ಬೆಂಗಳೂರು ರೋಯಿಂಗ್ ಪಟುಗಳ ಸಾಧನೆಗೆ ಸಲಾಂ - ವೈಎಂಸಿ ಕ್ಲಬ್

ರಾಜ್ಯದ ಏಕೈಕ ವಾಟರ್ ಸ್ಪೋರ್ಟ್ಸ್ ತರಬೇತಿ ಕೇಂದ್ರ ಬೆಂಗಳೂರಿನ ಎಲೆಮಲ್ಲಪ್ಪ ಚೆಟ್ಟಿ ಕೆರೆಯಲ್ಲಿ ಅಭ್ಯಾಸ ಮಾಡಿದ ಕ್ರೀಡಾಪಟುಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿದ್ದಾರೆ.

Bengaluru Rowing Athletes
ಪದಕ ಗೆದ್ದ ಬೆಂಗಳೂರಿನ ರೋಯಿಂಗ್ ಪ

By

Published : Jul 25, 2021, 8:29 AM IST

Updated : Jul 25, 2021, 2:23 PM IST

ಬೆಂಗಳೂರು:ಕೆರೆಯಲ್ಲಿ ಕ್ಯಾನೋಯಿಂಗ್, ಕಯಾಕಿಂಗ್, ರೋಯಿಂಗ್ ಅಭ್ಯಾಸ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಬೆಂಗಳೂರಿನ ಕ್ರೀಡಾಪಟುಗಳು ‌ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಬೆಂಗಳೂರಿನ ಹೊರವಲಯದ ಆವಲಹಳ್ಳಿ‌ ಎಲೆಮಲ್ಲಪ್ಪ ಚೆಟ್ಟಿ ಕೆರೆಯಲ್ಲಿ 2016 ರಿಂದ (5 ವರ್ಷಗಳಿಂದ ) ಅಭ್ಯಾಸ ಮಾಡಿದ ಕ್ರೀಡಾಪಟುಗಳು, ಎರಡು ವರ್ಷದಲ್ಲಿ‌ ಮೂರು ಚಿನ್ನದ ಪದಕ‌ ಸೇರಿ ಒಟ್ಟು 23 ಪದಕಗಳನ್ನು ಗೆದ್ದಿದ್ದಾರೆ. ವೈಎಂಸಿ ಸ್ಪೋರ್ಟ್ಸ್ ಕ್ಲಬ್ ಅಧೀನದಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು, 1992 ರಿಂದ ಇದುವರೆಗೆ ಸುಮಾರು 145 ಪದಕಗಳನ್ನು ಗೆದ್ದಿದ್ದಾರೆ.

ಅಂತಾರಾಷ್ಟ್ರೀಯ ಪದಕ ಗೆದ್ದ ಬೆಂಗಳೂರಿನ ರೋಯಿಂಗ್ ಪಟುಗಳು

ಮೊದಲು ಹಲಸೂರು ಕೆರೆಯಲ್ಲಿ ಅಭ್ಯಾಸ:

ಆರಂಭಲದಲ್ಲಿ ಹಲಸೂರು ಕೆರೆಯಲ್ಲಿ ಕ್ಯಾನೋಯಿಂಗ್, ಕಯಾಕಿಂಗ್, ರೋಯಿಂಗ್ ಕ್ರೀಡಾಪಟುಗಳು ಕ್ಯಾಪ್ಟನ್ ದಿಲೀಪ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದರು. ಹಲಸೂರು ಕೆರೆ ಸೇನೆಯ ಅಧೀನಕ್ಕೆ ಹೋದ ನಂತರ ಬಸವನಪುರ ವಾರ್ಡ್​ನ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಅವರ ಸಹಾಯದಿಂದ
ಆವಲಹಳ್ಳಿಯ ಎಲೆ ಮಲ್ಲಪ್ಪ ಚೆಟ್ಟಿ ಕೆರೆಯಲ್ಲಿ ಅಭ್ಯಾಸ ಮಾಡಲು ಎಲ್ಲಾ ರೀತಿಯಲ್ಲಿ ವೈಎಂಸಿ ಕ್ಲಬ್​ಗೆ ಅನುಕೂಲ ಮಾಡಿಕೊಡಲಾಯಿತು.

ರಾಜ್ಯದ ಏಕೈಕ ವಾಟರ್ ಸ್ಪೋರ್ಟ್ಸ್ ತರಬೇತಿ ಕೇಂದ್ರ ಎಲೆಮಲ್ಲಪ್ಪ ಚೆಟ್ಟಿ ಕೆರೆ

ರಾಜ್ಯದ ಏಕೈಕ ವಾಟರ್ ಸ್ಪೋರ್ಟ್ಸ್ ತರಬೇತಿ ಕೇಂದ್ರ :

ರಾಜ್ಯದಲ್ಲಿ ಆವಲಹಳ್ಳಿಯ ಎಲೆಮಲ್ಲಪ್ಪ ಚೆಟ್ಟಿ ಕೆರೆಯಲ್ಲಿ ಮಾತ್ರ ವಾಟರ್ ಸ್ಪೋರ್ಟ್ಸ್ ತರಬೇತಿ ನೀಡಲಾಗ್ತಿದೆ. ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳ ಸುಮಾರು‌ 23 ಕ್ಯಾನೋಯಿಂಗ್, ಕಯಾಕಿಂಗ್, ರೋಯಿಂಗ್ ಪಟುಗಳು ಬೆಳಗ್ಗೆ 3 ಗಂಟೆ ಮತ್ತು ಸಂಜೆ 3 ಗಂಟೆ ಅಭ್ಯಾಸ ಮಾಡುತ್ತಿದ್ದಾರೆ.

ಎಲೆಮಲ್ಲಪ್ಪ ಚೆಟ್ಟಿ ಕೆರೆಯಲ್ಲಿ ಅಭ್ಯಾಸ

ಇವರಿಗೆ ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್‌ ಮತ್ತು ಕಯಾಕಿಂಗ್ ಕ್ರೀಡೆಯಲ್ಲಿ ಚಿನ್ನದ‌ ಪದಕ ಪಡೆದಿರುವ ದಿಲೀಪ್ ಕುಮಾರ್ ಅವರು ತರಬೇತಿ ನೀಡುತ್ತಿದ್ದಾರೆ. ದಿಲೀಪ್ ಕುಮಾರ್ ಅವರು 1996 ರಿಂದ 1999 ರವರೆಗೆ ಭಾರತೀಯ ರೋಯಿಂಗ್ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ 1994ರಲ್ಲಿ ಮೊಟ್ಟ ಮೊದಲ ಬಾರಿಗೆ ಕ್ಯಾನೋಯಿಂಗ್ ಪರಿಚಯಿಸಲಾಯಿತು.

ಅಭ್ಯಾಸಕ್ಕೆ ಅಣಿಯಾದ ಕ್ರೀಡಾಪಟುಗಳು

ವೈಎಂಸಿ ಕ್ಲಬ್ ತರಬೇತಿ ಕೇಂದ್ರದಲ್ಲಿರುವ ಸಮಸ್ಯೆ ಮತ್ತು ಕ್ರೀಡಾ ಪಟುಗಳಿಗೆ ಬೇಕಾದ ಸವಲತ್ತುಗಳನ್ನು ಒದಗಿಸುವ ಕುರಿತು ಸಿಎಂ‌ ಯಡಿಯೂರಪ್ಪ ಅವರ ಗಮನಕ್ಕೂ ತರಲಾಗಿದೆ. ಮುಂದಿನ ದಿನಗಳಲ್ಲಿ ಕೆರೆ ಅಭಿವೃದ್ಧಿ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.

ಚಿನ್ನದ ಪದಕ ಗೆದ್ದ ರೋಯಿಂಗ್ ಪಟುಗಳು

ತಬೇತಿಯ ಕುರಿತು ಮಾತನಾಡಿದ ಕ್ಯಾಪ್ಟನ್ ದಿಲೀಪ್ ಕುಮಾರ್, ರಾಜ್ಯದಲ್ಲಿ ರೋಯಿಂಗ್ , ಕ್ಯಾನೋಯಿಂಗ್ ತರಬೇತಿ ನೀಡುವ ಏಕೈಕ ಜಾಗ ಎಲೆ ಮಲ್ಲಪ್ಪ ಚೆಟ್ಟಿ ಕೆರೆ. ಮೊದಲು ಹಲಸೂರು ಕೆರೆಯಲ್ಲಿ ತರಬೇತಿ ನೀಡಲಾಗುತ್ತಿತ್ತು. ಈಗ ಆ ಕೆರೆ ಸೇನಾ ಸಿಬ್ಬಂದಿಯ ತರಬೇತಿಗೆ ಮಾತ್ರ ಮೀಸಲಿಡಲಾಗಿದೆ. ಹಾಗಾಗಿ, ಸಾರ್ವಜನಿಕರಿಗೆ ತರಬೇತಿ ನೀಡಲು ಸರ್ಕಾರ ಎಲೆ ಮಲ್ಲಪ್ಪ ಕೆರೆಯಲ್ಲಿ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಿಂದ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಇಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಹಲವು ಪದಕಗಳನ್ನು ಗೆದ್ದಿದ್ದಾರೆ. ಕಳೆದ ಬಾರಿ ಕೇರಳದಲ್ಲಿ ನಡೆದಿದ್ದ ರೋಯಿಂಗ್ , ಕ್ಯಾನೋಯಿಂಗ್ ಸ್ಪರ್ಧೆಗಳಲ್ಲಿ ಹೆಚ್ಚು ಪದಕಗಳು ನಮ್ಮ ಕ್ರೀಡಾಪಟುಗಳ ಪಾಲಾಗಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದ್ದಾರೆ.

ಕ್ಯಾನೋಯಿಂಗ್, ಕಯಾಕಿಂಗ್, ರೋಯಿಂಗ್​ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳು

ಇಲ್ಲಿ ರೋಯಿಂಗ್, ಕ್ಯಾನೋಯಿಂಗ್ ತರಬೇತಿ ಕೇಂದ್ರ ಅಭಿವೃದ್ದಿಪಡಿಸಲು ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಿದೆ. ಜುಲೈ 30ರೊಳಗೆ 1 ಕೋಟಿ ರೂಪಾಯಿ ಮೌಲ್ಯದ ಕ್ರೀಡಾ ವಸ್ತುಗಳು ಬರಲಿವೆ. ಈ ತರಬೇತಿ ಕೇಂದ್ರದಲ್ಲಿ ಸುಮಾರು 23 ಜನ ತರಬೇತಿ ಪಡೆಯುತ್ತಿದ್ದಾರೆ. ಒಳ್ಳೆಯ ವಾತಾವರಣದಿಂದ ಕಲಿಕೆಗೆ ಸಹಕಾರಿಯಾಗುತ್ತಿದೆ. ಕೆರೆಯಲ್ಲಿ ಸೊಪ್ಪು, ಜೊಂಡು ಬೆಳೆದಿರುವುದು ತರಬೇತಿಗೆ ಒಂದಷ್ಟು ಕಿರಿಕಿರಿ ಆಗುತ್ತಿದೆ, ಅದನ್ನ ಸರಿಪಡಿಸಲು ಕೆಲ ಸಂಸ್ಥೆಗಳು ಮುಂದೆ ಬಂದಿವೆ. ಇಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಕ್ಕೆ ಇನ್ನಷ್ಟು ಪದಕಗಳನ್ನು ತಂದು ಕೊಡಲಿದ್ದಾರೆ ಎಂದು ಕ್ಯಾಪ್ಟನ್ ದಿಲೀಪ್ ಕುಮಾರ್ ತಿಳಿಸಿದ್ದಾರೆ.

Last Updated : Jul 25, 2021, 2:23 PM IST

ABOUT THE AUTHOR

...view details