ಬೆಂಗಳೂರು:ರಾಜಧಾನಿಯ ಹೃದಯಭಾಗ ಮೆಜೆಸ್ಟಿಕ್ನಲ್ಲಿಬಿಎಂಟಿಸಿ, ಕೆಎಸ್ಆರ್ಟಿಸಿ, ಎದುರಿಗೆ ರೈಲ್ವೆ ನಿಲ್ದಾಣ ಹಾಗೂ ಪಕ್ಕದಲ್ಲೇ ಮೆಟ್ರೋ ರೈಲು ಸೇವೆ ಇದ್ದು, ಈ ನಾಲ್ಕು ಸಾರಿಗೆ ಸೇವೆಗಳಲ್ಲಿ ನಿತ್ಯ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಆದರೆ, ಕೋವಿಡ್ ವಾರಾಂತ್ಯದ ನಿಷೇಧಾಜ್ಞೆ ಹೇರಿಕೆ ಹಿನ್ನೆಲೆಯಲ್ಲಿಮೆಜೆಸ್ಟಿಕ್ ಜನ ಹಾಗೂ ಸಾರಿಗೆ ಸಂಚಾರವಿಲ್ಲದೇ ಬಣಗುಡುತ್ತಿದೆ. ಸದ್ಯ ಲಭ್ಯವಿರುವ ಕೆಎಸ್ಆರ್ಟಿಸಿ ಬಸ್ಗಳಲ್ಲೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ.
ಮಜೆಸ್ಟಿಕ್ನ ಬಿಎಂಟಿಸಿ ಘಟಕದಲ್ಲಿ ಬಸ್ಗಳು ಕೇವಲ ಅಗತ್ಯ ಸೇವೆಗಷ್ಟೇ ಮೀಸಲಾಗಿದ್ದು, ಸಾರ್ವಜನಿಕರ ಸೇವೆಗೆ ನಿಷೇಧವಿದೆ. ಇತ್ತ ಕೆಎಸ್ಆರ್ಟಿಸಿ ಬಸ್ ಸಂಚಾರ ಇದ್ದರೂ ಬಸ್ಗಳು ಜನರಿಲ್ಲದೇ ಖಾಲಿ ಖಾಲಿಯಾಗಿ ನಿಲ್ದಾಣದಿಂದ ತೆರಳುತ್ತಿದ್ದ ದೃಶ್ಯ ಕಂಡು ಬಂತು.
ಶೇ. 10ರಷ್ಟು ಬಸ್ ಸಂಚಾರವಿದ್ದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿದೆ. ರೈಲ್ವೆ ಪ್ರಯಾಣಿಕರು ಮಾತ್ರ ಬಸ್ ಅವಲಂಬಿಸಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಪ್ರಯಾಣಿಕರಿಲ್ಲದೇ ಬಿಕೋ ಎನ್ನುತ್ತಿದೆ. ಬೆಳಗಿನ ಜಾವ ಸುಮಾರು 4 ಸಾವಿರಕ್ಕೂ ಹೆಚ್ಚು ಬಿಎಂಟಿಸಿ ಬಸ್ ಸಂಚಾರ ಇರುತ್ತಿತ್ತು. ಆದರೆ, ಇಂದು ರಾಜಧಾನಿಯಲ್ಲಿ ಕೇವಲ 500 ಬಸ್ ಮಾತ್ರ ಸಂಚರಿಸುತ್ತಿವೆ.