ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯದ 58ನೇ ವಾರ್ಷಿಕ ಘಟಿಕೋತ್ಸವವು ಮಂಗಳವಾರ ನಡೆಯಲಿದ್ದು, ಈ ಬಾರಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಇಸ್ರೋ ಅಧ್ಯಕ್ಷ ಹಾಗು ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಎಸ್.ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ತಿಳಿಸಿದರು.
ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಳಿಗ್ಗೆ 10.30ಕ್ಕೆ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಭಾಗವಹಿಸಲಿದ್ದಾರೆ. ಯುವ ಉದ್ಯಮಿ, ಝಿರೋದಾ ಸಂಸ್ಥೆಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಘಟಿಕೋತ್ಸವದಲ್ಲಿ ಒಟ್ಟು 28,871 ಅಭ್ಯರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದು, 13,707 ವಿದ್ಯಾರ್ಥಿಗಳು ಹಾಗೂ 15,164 ವಿದ್ಯಾರ್ಥಿನಿಯರಿದ್ದಾರೆ. ಒಟ್ಟು 299 ಚಿನ್ನದ ಪದಕ ಹಾಗೂ 113 ನಗದು ಬಹುಮಾನಗಳನ್ನು ಒಟ್ಟು 193 ವಿದ್ಯಾರ್ಥಿಗಳಿಗೆ ನೀಡಲಾಗುವುದು. 204 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗುವುದು. 20 ಗ್ರಾಂ ಬೆಳ್ಳಿಯ ನಾಣ್ಯಕ್ಕೆ 18 ಕ್ಯಾರೆಟ್‌ನ 1.3 ಗ್ರಾಂ ಚಿನ್ನದ ಲೇಪನ ಮಾಡಿರುವ ಪದಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು ಎಂದು ಹೇಳಿದರು.
ಸ್ನಾತಕೋತ್ತರ ವಿಭಾಗದಲ್ಲಿ ಆಕ್ಸ್‌ಫರ್ಡ್ ವಿಜ್ಞಾನ ಮತ್ತು ಕಲಾ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಜೆ.ವಿನುತಾ, ಅತಿ ಹೆಚ್ಚು 8 ಚಿನ್ನದ ಪದಕ ಹಾಗೂ 3 ನಗದು ಬಹುಮಾನ, ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ ಉದಯ ಕುಮಾರ ಮುರಗೋಡ 8 ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಡಬ್ಲ್ಯೂ ಅಸ್ಮಾ ಬಾನು , ಗಣಿತಶಾಸ್ತ್ರ ವಿಭಾಗದ ಟಿ.ಎಂ.ದಿವ್ಯ, ಪ್ರಾಣಿಶಾಸ್ತ್ರ ವಿಭಾಗದ ಎ.ನಮ್ರತಾ ಸಂಸ್ಕೃತ ವಿಭಾಗದ ಭವಿಷ್ಯ ತಲಾ 6 ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದು ವಿವರ ಒದಗಿಸಿದರು.
ಸ್ನಾತಕ ವಿಭಾಗದಲ್ಲಿ ಎಎಸ್‌ಸಿ ಪದವಿ ಕಾಲೇಜಿನ ದೀಕ್ಷಿತ.ಆರ್.ನಾಯಕ್ ಹಾಗೂ ವಿಶ್ವಚೇತನ ಪದವಿ ಕಾಲೇಜಿನ ಎಸ್.ಎಂ.ರವಿಕುಮಾರ, ಯುವಿಸಿಇ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಯೋಗೇಶ್ವರನ್ ತಲಾ 5 ಚಿನ್ನದ ಪದಕ ಪಡೆದಿದ್ದಾರೆ. ಜಿಂದಾಲ್ ಮಹಿಳಾ ಕಾಲೇಜಿನ ಎಸ್. ಚೈತ್ರ ಬೆಂಗಳೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಟಿ.ಎಂ.ದಿವ್ಯ ಹಾಗೂ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ವೇತಾ ಮುರಗೋಡ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದರು.