ಬೆಂಗಳೂರು: ಬೆಂಗಳೂರು ನಗರದಲ್ಲಿ ಬಿಎಂಟಿಸಿಯ ಸಂಚಾರಾಭಿವೃದ್ಧಿ, ಕಾರ್ಯಾಚರಣೆ ನಿರ್ವಹಣೆ ಮೇಲ್ವಿಚಾರಣೆಗಾಗಿ 2022ನೇ ಸಾಲಿನ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಇಂದು ಮಂಡಿಸಿದರು.
ಕಾಂಗ್ರೆಸ್-ಜೆಡಿಎಸ್ ಸದಸ್ಯರ ಗದ್ದಲದ ನಡುವೆಯೇ ಬಿಎಂಟಿಸಿಯ ಮೇಲುಸ್ತುವಾರಿಯಾಗಿ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಮಂಡಿಸಲಾಗಿದೆ. ಬಿಡಿಎ, ಬೆಂಗಳೂರು ಮಹಾನಗರ ವಲಯ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಂಚಾರ ಪೊಲೀಸ್, ಬಿಎಂಟಿಸಿ, ಬಿಬಿಎಂಪಿ, ಬೆಂಗಳೂರು ಮೆಟ್ರೋ ರೈಲು ಇನ್ನು ಮುಂದೆ ಒಂದೇ ಸೂರಿನಡಿ ನಿರ್ವಹಣಾ ಚಟುವಟಿಕೆಗಳನ್ನು ನಡೆಸಲಿವೆ.
ನಗರ ಸಂಚಾರವನ್ನು ಸುಗಮಗೊಳಿಸುವ ಮತ್ತು ಉತ್ತಮಪಡಿಸುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಲು ಹಿಂದಿನ ಪದ್ಧತಿಯಿಂದ ಅಡ್ಡಿಯುಂಟಾಗುತ್ತಿತ್ತು. ರಾಷ್ಟ್ರೀಯ ನಗರ ಸಾರಿಗೆ ನೀತಿಯನ್ನು ಸಶಕ್ತಗೊಳಿಸಲು ಸಂಸ್ಥೆಗಳು ಹಾಗೂ ವಿವಿಧ ಇಲಾಖೆಯನ್ನು ಒಂದೇ ಸೂರಿನಡಿ ತರಬೇಕೆಂಬ ಗುರಿಯೊಂದಿಗೆ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಮಂಡನೆ ಮಾಡಲಾಗಿದೆ.
ಆರ್ಥಿಕತೆ, ಮೂಲ ಸೌಕರ್ಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಾರುಕಟ್ಟೆ ಸ್ಥಾಪನೆ ನಿರ್ವಹಣೆ, ಪರಿಸರ ಸಂರಕ್ಷಣೆ ಉತ್ತೇಜನ ನೀಡುವಲ್ಲಿ ಪ್ರಭಾವ ಬೀರುವ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳು ಪರಿಣಾಮ ಬೀರುತ್ತಿರುವುದರಿಂದ ಈ ವಿಧೇಯಕವನ್ನು ಜಾರಿಗೆ ತರಲಾಗಿದೆ.
(ಓದಿ: ಕಾಂಗ್ರೆಸ್, ಜೆಡಿಎಸ್ ಧರಣಿ ನಡುವೆ ನಾಲ್ಕು ವಿಧೇಯಕಗಳ ಅಂಗೀಕಾರ: ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ)
ಕೇವಲ ಮಂಡನೆಗೆ ಸೀಮಿತವಾದ ಕಲಾಪ: ವಿಧಾನಸಭೆಯಲ್ಲಿ ಇಂದು ಗದ್ದಲ ಮತ್ತು ಕೋಲಾಹಲ ಉಂಟಾಗಿದ್ದರಿಂದ ಪ್ರಶ್ನೋತ್ತರ ಕಲಾಪ ನಡೆಯದೇ ಕೇವಲ ವಿಧೇಯಕ ಮಂಡನೆಗೆ ಸೀಮಿತವಾಯಿತು. ಬೆಳಗ್ಗೆಯಿಂದಲೇ ಜೆಡಿಎಸ್ ಸದಸ್ಯರು ಬಿಎಂಎಸ್ ಟ್ರಸ್ಟ್ ಅಕ್ರಮ ಪ್ರಕರಣವನ್ನು ತನಿಖೆಗೆ ವಹಿಸಬೇಕೆಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.